ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನ್ಯೂಕ್ಲಿಯರ್ ಎನರ್ಜಿ ಹಾಗೂ ಇತರೆ ರೇಡಿಯೋ ಆಕ್ಟಿವ್ ಮೆಟೀರಿಯಲ್ ವಸ್ತುಗಳು ವಿನಾಶಕಾರಿ ಹಾಗೂ ದೇಶವಿರೋಧಿ ಕೃತ್ಯಕ್ಕೆ ಬಳಕೆಯಾಗದಂತೆ ಪೊಲೀಸ್ ವ್ಯವಸ್ಥೆ ನಿಗಾ ವಹಿಸಬೇಕು ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ (ಕೆಪಿಎ) ನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ ತಿಳಿಸಿದರು.ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ನ್ಯೂಕ್ಲಿಯರ್ ಎನರ್ಜಿ ಹಾಗೂ ಇತರೆ ರೇಡಿಯೋ ಆಕ್ಟಿವ್ ಮೆಟೀರಿಯಲ್/ ವಿಕಿರಣ ಶೀಲ ವಸ್ತುಗಳ ನಿರ್ವಹಣೆ ಹಾಗೂ ತನಿಖೆ ಕುರಿತು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಿಗೆ ಆಯೋಜಿಸಿದ್ದ 2 ದಿನಗಳ ತರಬೇತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಭಾರತ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಾಗಾರ ನೆಡೆಯುತ್ತಿದ್ದು, ಇದು ಪೊಲೀಸ್ ಅಧಿಕಾರಿಗಳಿಗೆ ಹೊಸ ವಿಷಯವಾಗಿದೆ. ನ್ಯೂಕ್ಲಿಯರ್ ಎನರ್ಜಿ ಹಾಗೂ ಇತರೆ ರೇಡಿಯೋ ಆಕ್ಟಿವ್ ಮೆಟೀರಿಯಲ್/ ವಿಕಿರಣ ಶೀಲ ವಸ್ತುಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ಇವುಗಳನ್ನು ಕೈಗಾರಿಕಾ ಕ್ಷೇತ್ರದಲ್ಲಿ, ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಹಾಗೂ ಪರಿಸರ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಕೂಡ ಬಳಸಲಾಗುತ್ತದೆ ಎಂದರು.ಹಾಗೆಯೇ ಈ ವಸ್ತುಗಳನ್ನು ವಿನಾಶಕಾರಿ ಉದ್ದೇಶಕ್ಕೆ ಬಳಸದಂತೆ ಸಂಬಂಧಪಟ್ಟ ಸಂಸ್ಥೆಗಳು ಹಾಗೂ ಪೊಲೀಸ್ ಅಧಿಕಾರಿಗಳು ನಿಗಾ ವಹಿಸಬೇಕಾಗುತ್ತದೆ. ನ್ಯೂಕ್ಲಿಯರ್ ಎನರ್ಜಿ ಹಾಗೂ ಇತರೆ ರೇಡಿಯೋ ಆಕ್ಟಿವ್ ಮೆಟೀರಿಯಲ್ ಸೂಕ್ಷ್ಮ ವಸ್ತುಗಳಾಗಿದ್ದು, ಬಹಳ ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕಾಗುತ್ತದೆ. ಇದರ ನಿರ್ವಹಣೆಯಲ್ಲಿ ವೈಫಲ್ಯವಾದರೆ ಬಹು ದೊಡ್ಡ ಮಟ್ಟದ ಪರಿಸರ ಹಾನಿಯಾಗಿ, ಮಾನವ ಆರೋಗ್ಯಕ್ಕೆ ಹಾನಿ ಉಂಟುಮಾಡುವುದೂ ಅಲ್ಲದೇ, ಮುಂದಿನ ಪೀಳಿಗೆಯ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ಸಮಾಜದಲ್ಲಿ ಯಾವುದೇ ಅಪಘಾತ ಪ್ರಕರಣಗಳು ನೆಡೆದಾಗ ಮೊದಲ ಪ್ರತಿಸ್ಪಂದಕರಾದ ಪೊಲೀಸರಿಗೆ ಈ ವಿಷಯದ ಕುರಿತು ಮಾಹಿತಿ ಹಾಗೂ ಜ್ಞಾನ ಮುಖ್ಯವಾಗಿದ್ದು, ಈ ಕಾರ್ಯಾಗಾರವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು ಈ ಕಾರ್ಯಾಗಾರದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ಹಿರಿಯ ವಿಜ್ಞಾನಿ ಹಾಗೂ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಭಾರತದ ಪ್ರತಿನಿಧಿಯಾಗಿದ್ದ ಡಾ. ಶೇಷಾದ್ರಿ ಮುರುಳಿ, ಅಮಿಟಿ ವಿವಿ ಯುವ ವಿಜ್ಞಾನಿ ಡಾ. ಅಭಿಷೇಕ್ ಯಾದವ್ ಹಾಗೂ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ವಿಜ್ಞಾನಿ ಡಾ. ರಾಮನ ರವಿಶಂಕರ್ ಅವರು ಕಾರ್ಯಾಗಾರ ನಡೆಸಿಕೊಟ್ಟರು.
ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಪೊಲೀಸ್ ಘಟಕಗಳಿಂದ 35 ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಕೆಪಿಎ ಸಹಾಯಕ ನಿರ್ದೇಶಕ ಸಂದೇಶ್ ಕುಮಾರ್ ಮತ್ತು ಇತರೆ ಅಧಿಕಾರಿಗಳು ಇದ್ದರು.ಸಿಎಂ ಜಿಲ್ಲೆಯಲ್ಲಿ ಡ್ರಗ್ಸ್ ಘಟಕ ಪತ್ತೆ ತಲೆ ತಗ್ಗಿಸುವ ವಿಚಾರ: ಕಿರಣ್ ಜೈರಾಮ್ ಗೌಡ
ಮೈಸೂರು: ಮುಖ್ಯಮಂತ್ರಿ, ಇಬ್ಬರು ಸಚಿವರ ತವರು ಜಿಲ್ಲೆ ಮೈಸೂರಿನಲ್ಲೇ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿರುವುದು ತಲೆ ತಗ್ಗಿಸುವಂತಹ ವಿಚಾರ. ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಜೈರಾಮ್ ಗೌಡ ಆರೋಪಿಸಿದ್ದಾರೆ.ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದರೆ ಈ ಡ್ರಗ್ಸ್ ಮಾಫಿಯಾವನ್ನು ಮತ್ತು ನಶೆಯ ಮತ್ತಿನಲ್ಲಿ ಹಾಡು ಹಗಲಲ್ಲೇ ಮಚ್ಚು ಲಾಂಗು ಹಿಡಿದು ಹಲ್ಲೆ ನಡೆಸುವ ಪುಂಡರನ್ನು ಮಟ್ಟ ಹಾಕಬಹುದಿತ್ತು. ನಮ್ಮ ರಾಜ್ಯದಲ್ಲಿ ಡ್ರಗ್ಸ್ ಫ್ಯಾಕ್ಟರಿಯನ್ನು ನಮ್ಮ ಪೊಲೀಸ್ ಇಲಾಖೆ ಪತ್ತೆ ಹಚ್ಚಲು ವಿಫಲವಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸಬೇಕಿದೆ. ಕಾಂಗ್ರೆಸ್ ಸಚಿವರ ಆಪ್ತರ ಬೆಂಬಲದಿಂದಲೇ ಈ ಡ್ರಗ್ಸ್ ದಂದೆ ಲೀಲಾಜಾಲವಾಗಿ ನಡೆಯುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ದೂರಿದ್ದಾರೆ.