ಸಾರಾಂಶ
ಶಿರಹಟ್ಟಿ: ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಲ್ಲ ಯೋಜನೆಗಳನ್ನು ಅವರಿಗಾಗಿ ಮಾತ್ರ ಸದ್ವಿನಿಯೋಗವಾಗಬೇಕು. ಲೋಪದೋಷವಾಗದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು.ಮುಖ್ಯವಾಗಿ ಈ ಕುರಿತು ಎಲ್ಲರಲ್ಲಿ ಜಾಗೃತಿ ಮೂಡುವ ಅಗತ್ಯವಾಗಿದೆ ಎಂದು ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ಅಧ್ಯಕ್ಷ ಶಶಿಧರ ಶಿರಸಂಗಿ ಹೇಳಿದರು.
ಮಂಗಳವಾರ ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ರಾಜಕೀಯ ಅಥವಾ ತಮ್ಮ ವೈಯಕ್ತಿಕ ಹಿತಾಸಕ್ತಿಗನುಗುಣವಾಗಿ ವರ್ತಿಸದೇ ಅರ್ಹ ಅಂಗವಿಕಲ ಫಲಾನುಭವಿಗಳಿಗೆ ಸೌಲಭ್ಯ ಸಿಗುವ ಕೆಲಸವಾಗಬೇಕಿದೆ. ಸರ್ಕಾರದ ನಿರ್ದೇಶನದಂತೆ ಕಾರ್ಯ ನಿರ್ವಹಿಸದಿದ್ದರೆ ತಮ್ಮ ಒಕ್ಕೂಟದ ಅಡಿಯಲ್ಲಿ ಹೋರಾಟ ಅನಿವಾರ್ಯ ಎಂದು ಹೇಳಿದರು.ಹಲವು ವರ್ಷಗಳಿಂದ ಪಪಂ ವ್ಯಾಪ್ತಿಯಲ್ಲಿ ಬರುವ ಶಿರಹಟ್ಟಿ, ಹರಿಪುರ ಹಾಗೂ ಖಾನಾಪುರದಲ್ಲಿರುವ ವಿಕಲಚೇತನರಿಗೆ ಪಪಂ ಅಭಿವೃದ್ಧಿ ಅನುದಾನದಲ್ಲಿ ವಿಕಲಚೇತನರ ಸರ್ವಾಂಗೀಣ ಅಭಿವೃದ್ಧಿಗಾಗಿ ಶೇ. ೫% ಹಣ ಮೀಸಲಿಡಬೇಕು ಎಂದು ನಿಯಮವಿದೆ ಆದರೆ ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ ಎಂದರು.
ಪ್ರಾಮಾಣಿಕವಾಗಿ ವಿಕಲಚೇತನರ ಅಭಿವೃದ್ಧಿಗಾಗಿಯೇ ಮೀಸಲಿಟ್ಟ ಹಣ ಬಳಸಬೇಕು. ವಿಕಲಚೇತನರ ವ್ಯಕ್ತಿಗಳ ೨೦೧೬ರನ್ವಯ ಕಡ್ಡಾಯ ಕಾಯಿದೆಯಿದ್ದರೂ ಕೂಡ ಈವರೆಗೂ ವಿಕಲಚೇತನರಿಗಾಗಿ ಮೀಸಲಿರಿಸಲಾಗಿದ್ದ ಯೋಜನೆ ಸದ್ಬಳಕೆಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ವಿಕಲಚೇತನರ ಮೀಸಲಾತಿಯಲ್ಲಿ ಬರುವ ನಿವೇಶನ ಹಾಗೂ ಮನೆಗಳನ್ನು ವಿಕಲಚೇತನರಿಗಾಗಿಯೇ ಮಂಜೂರು ಮಾಡಬೇಕು. ಇತರರಿಗೆ ನೀಡಿದಂತೆ ಕಡ್ಡಾಯ ಕಾನೂನು ರೂಪಿಸಬೇಕು. ಕಳೆದ ೧೦ ವರ್ಷಗಳಿಂದ ಇತ್ತೀಚೆಗೆ ವಿಕಲಚೇತನರ ಹೆಸರಿನಲ್ಲಿ ಮಂಜೂರಾದ ಮನೆಗಳನ್ನು ಸಾಮಾನ್ಯ ಜನರಿಗೆ ವಿಕಲಚೇತನರು ಎಂದು ಪರಿಗಣಿಸಿ ಬೇರೆಯವರಿಗೆ ಮನೆ ಮಂಜೂರು ಮಾಡಿದ್ದು ಕೇಳಿ ಬಂದಿದ್ದು, ಇದು ವಿಕಲಚೇತನ ವ್ಯಕ್ತಿಗಳ ಕಾಯಿದೆ ೨೦೧೬ರ ಅನ್ವಯ ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.
ವಿಕಲಚೇತನರ ಹೆಸರಿನಲ್ಲಿ ಸಾಮಾನ್ಯ ಜನರಿಗೆ ನೀಡಿದ ಮನೆಗಳನ್ನು ಕಾನೂನಿನ ಪ್ರಕಾರ ವಾಪಸ್ ಪಡೆಯುವಂತೆ ನೋಟಿಸ್ ಜಾರಿ ಮಾಡಬೇಕು. ಸ್ವಾವಲಂಬಿ ಜೀವನ ನಡೆಸಲು ವಿಕಲಚೇತನರ ಅನುದಾನದಲ್ಲಿ ಆರ್ಥಿಕ ಸಹಾಯಧನ ನೀಡದೇ ಅವರಿಗೆ ಅನುಕೂಲ ಮಾಡಿಲ್ಲ. ವಿಕಲಚೇತನರ ಹೆಸರಿನಲ್ಲಿ ಬರುವ ಇನ್ನು ಅನೇಕ ಯೋಜನೆ ಪಪಂ ಮಟ್ಟದಲ್ಲಿ ದುರುಪಯೋಗ ಮಾಡಲಾಗಿದ್ದು, ಆದಷ್ಟು ಬೇಗನೆ ತಾವು ಇವೆಲ್ಲವುಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ನಿಜವಾದ ವಿಕಲಚೇತನರಿಗೆ ಸ್ವಾವಲಂಬಿ ಜೀವನ ನಡೆಸಲು ವ್ಯಾಪಾರ ವಹಿವಾಟು ಮಾಡಲು ಸೂಕ್ತ ಅನುದಾನ ಹಾಗೂ ಗೌರವದಿಂದ ಬಾಳಲು ಮನೆಗಳನ್ನು ಪ್ರಾಮಾಣಿಕತೆಯಿಂದ ಒದಗಿಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಸುಮಂಗಲಾ ಬೆಟಗೇರಿ, ಜ್ಯೋತಿ ಗೌಳಿ, ರೇಣುಕಾ ವಡವಿ, ಗಾಳೆಪ್ಪ ನಡುವಿಮನಿ, ವನಜಾಕ್ಷಿ ಹಾಲಗಿಮಠ, ರೇಖಾ ಕೊಡ್ಲಿ, ಲಕ್ಷ್ಮವ್ವ ಕರಿಲಿಂಗಣ್ಣವರ, ಜ್ವಾಲಮ್ಮ ಮಂಟಗಣಿ, ಪ್ರೇಮಾ ಬಡೆಪ್ಪನವರ, ಜಯಶ್ರೀ ಪೂಜಾರ, ಜಯಪ್ಪ ಲಮಾಣಿ, ನಾಮದೇವ ಲಮಾಣಿ, ಫಕೀರೇಶ ಹಡಪದ, ಶಿವಾನಂದ ಕುದರಿ, ಜಗದೀಶ ಕಮ್ಮಾರ. ಹಾಲೇಶ ಜಗದರ, ನಾಗಪ್ಪ ಅಣ್ಣಿಗೇರಿ, ಬಸವರಾಜ ತಳವಾರ, ರಾಜಶೇಖರ ಕನಕೇರಿ, ಮಂಜುನಾಥ ರಾಮಗೇರಿ, ಪ್ರಕಾಶ ಕಾಟ್ರಹಳ್ಳಿ, ಶರಣಪ್ಪ ಚಕಾರದ, ನಿಂಗಪ್ಪ ಹುಳ್ಳಿ, ಫಕ್ಕೀರೇಶ ಚಿಗಳ್ಳಿ ಮತ್ತಿತರರು ಉಪಸ್ಥಿತರಿದ್ದರು.