ಸೌಲತ್ತು ವಿತರಣೆಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಿ

| Published : Mar 07 2025, 12:45 AM IST

ಸಾರಾಂಶ

ಚಾಮರಾಜನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಮಂಜೂರಾಗಿರುವ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ಸಂಸದ ಸುನೀಲ್ ಬೋಸ್ ವಿತರಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮುಂದಿನ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಬಾರದು. ಅದರಲ್ಲೂ ಕಾಡಂಚಿನ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಎಂದು ಸಂಸದ ಸುನೀಲ್ ಬೋಸ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗೆ ಸಾಲ ಸೌಲಭ್ಯ ಕೊಡಿಸಲು ಅಧಿಕಾರಿಗಳು ಕ್ರಮವಹಿಸಬೇಕು. ಬ್ಯಾಂಕಿನವರು ವಿನಾ ಕಾರಣ ತೊಂದರೆ ನೀಡಬಾರದು ಎಂದರು.ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕೊಡಲಾಗುತ್ತಿದೆ. ಅರ್ಜಿ ಸಲ್ಲಿಸಿರುವ ಅನೇಕರಿಗೆ ಸಾಲ ನೀಡದಿರುವ ಕುರಿತು ದೂರು ಬರುತ್ತಿವೆ. ಆದ್ದರಿಂದ ಬಡವರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಪ್ರಾಮಾಣಿಕ ಪ್ರಯತ್ನ ಮಾಡಬೇಕು, ಕೇವಲ ದಾಖಲೆಗಳಾಗದೇ ಅರ್ಹರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಖಾ ಮಾತನಾಡಿ, ಈಗಾಗಲೇ ೫೧೩೦ ಅರ್ಜಿಗಳು ಬಂದಿದ್ದು ಇವರಲ್ಲಿ ೫ ಸಾವಿರಕ್ಕೂ ಹೆಚ್ಚು ಜನರಿಗೆ ಸಾಲ ಸೌಲಭ್ಯ ಕೊಡಿಸಲಾಗಿದೆ. ಬಾಕಿ ಇರುವವರಿಗೆ ಸಾಲ ಕೊಡಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿ ಮಾತನಾಡಿ, ಗುಂಡ್ಲುಪೇಟೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಜಂಟಿ ಸರ್ವೆ ನಡೆಸಿ ನೀರು ಪೂರೈಕೆ ಮಾಡಲು ಕ್ರಮವಹಿಸಲಾಗಿದೆ. ಅದೇ ರೀತಿ ಅಮೃತ್-೨ ಯೋಜನೆಯಡಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಮುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಚಾಮರಾಜನಗರ, ಯಳಂದೂರು, ಹನೂರು, ಗುಂಡ್ಲುಪೇಟೆಯಲ್ಲಿ ಒಳಚರಂಡಿ ನಿರ್ಮಾಣಕ್ಕೆ ೧೪೪ ಕೋಟಿ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತಾ ಕ್ರಮಕೈಗೊಳ್ಳಿ: ಸುನೀಲ್ ಬೋಸ್

ಜಿಲ್ಲಾವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಸ್ತೆ ಸಂಚಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು. ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಾರ್ವಜನಿಕ ಸಂಚಾರಕ್ಕಾಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಅಭಿವೃದ್ಧಿಪಡಿಸಲಾಗಿರುವ ರಸ್ತೆಗಳಲ್ಲಿ ಸಂಚಾರಿ ಸುರಕ್ಷತಾ ಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಬೇಕು. ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ರಸ್ತೆಗಳ ಗುಣಮಟ್ಟ ಕಾಪಾಡಬೇಕು. ಅಗತ್ಯವಿರುವೆಡೆ ವೃತ್ತಗಳನ್ನು ನಿರ್ಮಿಸಬೇಕು. ಈ ಸಂಬಂಧ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚಿಸಿದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅಮೃತ್ ೨.೦ ಯೋಜನೆ ಜಿಲ್ಲೆಯಲ್ಲಿ ಕೇಂದ್ರಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮಗಳನ್ನು ನಿಯಾಮಾನುಸಾರ ಅಧಿಕಾರಿಗಳು ನನ್ನನ್ನು ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದು ಅನುಷ್ಠಾನಗೊಳಿಸಬೇಕು. ಬೇಸಿಗೆ ಆರಂಭವಾಗುತ್ತಿರುವುದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಜಲಜೀವನ್ ಯೋಜನೆಯಡಿ ಕಾಡಂಚಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಪಡಿಸದೇ ಸಹಕರಿಸಬೇಕು ಎಂದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಜಿಲ್ಲೆಯ ಕಾಡಂಚಿನ ಪ್ರದೇಶಗಳು ಹಾಗೂ ಹಾಡಿಗಳಿಗೆ ಸಮರ್ಪಕ ರಸ್ತೆ, ವಿದ್ಯುದ್ದೀಕರಣ, ಕುಡಿಯುವ ನೀರು ಸೇರಿದಂತೆ ಇತರೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕಾಮಗಾರಿ ಆರಂಭಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ವಿದ್ಯುದ್ದೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಉಳಿದ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದರು.

ಬಳಿಕ ಮಾತನಾಡಿದ ಸಂಸದ ಸುನಿಲ್ ಬೋಸ್, ಜಿಲ್ಲೆಯಲ್ಲಿ ಬಡತನ ಹಾಗೂ ಅರಿವಿನ ಕೊರತೆಯಿಂದ ಬಾಲ್ಯವಿವಾಹಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಯಾವುದೇ ಭಾಗದಲ್ಲಿ ಬಾಲ್ಯವಿವಾಹ ನಡೆಯುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜನರಿಗೆ ತಿಳಿವಳಿಕೆ ಹೇಳಬೇಕು. ಜಿಲ್ಲಾದ್ಯಂತ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಬಾಲ್ಯವಿವಾಹಗಳನ್ನು ತಡೆಯಲು ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲಿ ಪರಿಣಾಮಕಾರಿ ಜಾಗೃತಿ ಮೂಡಿಸಿ ಹೆಚ್ಚಿನ ಪ್ರಗತಿ ಸಾಧಿಸುವ ಪಂಚಾಯಿತಿಗೆ ಬಾಲ್ಯವಿವಾಹ ಮುಕ್ತ ಗ್ರಾಪಂ ಎಂದು ಘೋಷಿಸಿ ಪ್ರಶಸ್ತಿ ನೀಡುವ ಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬ್ಯಾಂಕುಗಳು ಜನರಿಗೆ ಸಕಾಲದಲ್ಲಿ ಸಾಲ ನೀಡಬೇಕು. ಜನರನ್ನು ಪದೆಪದೇ ಅಲೆದಾಡಿಸಬಾರದು. ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ಕೇಂದ್ರಸರ್ಕಾರ ಅನುಷ್ಠಾನ ಮಾಡುತ್ತಿದೆ. ಯೋಜನೆಗಳು ಫಲಪ್ರದವಾಗಬೇಕು. ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವಾಗಬೇಕು ಎಂದರು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಸಮರ್ಪಕವಾಗಿ ನೀಡಬೇಕು. ಇತ್ತೀಚೆಗೆ ಕಾಣಿಸಿಕೊಂಡಿರುವ ಹಕ್ಕಿಜ್ವರ ಇತರೆಡೆಯಿಂದ ಜಿಲ್ಲೆಗೆ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ವಹಿಸಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಯಾವುದೇ ಲೋಪಗಳಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಕಂಡುಬಂದರೆ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಪ್ರಾಣಹಾನಿ ಸಂಭವಿಸದಂತೆ ಎಚ್ಚರ ವಹಿಸುವಂತೆ ಸಂಸದ ಸುನಿಲ್ ಬೋಸ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಮಂಜೂರಾಗಿರುವ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ಸಂಸದ ಸುನೀಲ್ ಬೋಸ್ ವಿತರಿಸಿದರು. ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.