ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ‌‌ ಕೊರತೆಯಾಗದಂತೆ ನಿಗಾವಹಿಸುವ ಜೊತೆಗೆ ಸಾಧ್ಯವಾದಷ್ಟು ರಸಗೊಬ್ಬರಗಳ‌ ಬಳಕೆ ಕಡಿಮೆ ಮಾಡುವಂತೆ ರೈತರಲ್ಲಿ‌ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಸಮರ್ಪಕ ಪೂರೈಕೆ ಹಾಗೂ ಭೂ ತಾಯಿ ರಕ್ಷಣೆ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ‌ ಬಾರಿ‌ ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಿಲ್ಲ. ಈ ಬಾರಿ ಸಹ ಅದೇ ರೀತಿ ಪೂರೈಕೆಗೆ ಕ್ರಮ ವಹಿಸಬೇಕು. ಕಳೆದ ಬಾರಿ ಜಿಲ್ಲೆಯಲ್ಲಿ ರಸಗೊಬ್ಬರ ಬಳಕೆ ಕಡಿಮೆಯಾಗಿದ್ದು, ಈ ಬಾರಿ ಅಧಿಕಾರಿಗಳು, ರಸಗೊಬ್ಬರ ಪೂರೈಕೆದಾರರು ಸಮನ್ವಯ ಸಾಧಿಸಿ ರೈತರಲ್ಲಿ ರಸಗೊಬ್ಬರ ಬಳಕೆ‌ಯನ್ನು ಕಡಿಮೆ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ರಸಗೊಬ್ಬರ ಮಾರಾಟದಲ್ಲಿ ಕೃತಕ ಅಭಾವ, ಕಾಳಸಂತೆಯಲ್ಲಿ‌ ಮಾರಾಟ ಮಾಡಬಾರದು. ಕಳೆದ ಬಾರಿ ಕೆಲ ಸ್ಥಳಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ‌ ದರಕ್ಕೆ ಮಾರಾಟ ಮಾಡಿದವರ ಕುರಿತು ದೂರುಗಳು ಬಂದಿದ್ದು, ಈ ಬಾರಿ ಆ ರೀತಿ ಆಗದಂತೆ ನಿಗಾವಹಿಸಬೇಕು. ರಸಗೊಬ್ಬರ ದಾಸ್ತಾನು ಕುರಿತು ರೈತರಿಗೆ ಸರಿಯಾದ ಮಾಹಿತಿ ಒದಗಿಸಬೇಕು. ರೈತರಲ್ಲಿ ವಿನಾಕಾರಣ ಆತಂಕ‌ ಮೂಡಿಸದೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಇಲಾಖೆ ವತಿಯಿಂದ ರೈತರಿಗೆ ಎಲ್ಲ‌ ರೀತಿಯ ಮಾಹಿತಿ ವಿನಿಮಯ ಮಾಡಬೇಕು. ರೈತ ಸಂಘಟನೆಗಳೊಂದಿಗೆ ನಿಯಮಿತವಾಗಿ ಸಭೆ ಜರುಗಿಸಿ ಪರಿಸ್ಥಿತಿಯ ವಿವರಗಳನ್ನು ಒದಗಿಸಬೇಕು. ಜಿಲ್ಲೆಗೆ ಬೇಕಾದಂತಹ ರಸಗೊಬ್ಬರ ತರಲು ಇಲಾಖೆಯ ಜೊತೆಗೆ ಪೂರೈಕೆದಾರರು ಪ್ರಯತ್ನಿಸಬೇಕು. ಜಿಲ್ಲೆಯ ಎಲ್ಲ ರಸಗೊಬ್ಬರ ಅಂಗಡಿಗಳ ದಾಸ್ತಾನಿನ‌ ವಿವರ ಲಭ್ಯವಿದ್ದು, ರಸಗೊಬ್ಬರ ಪೂರೈಕೆಗೆ ಸಂಬಂಧಿಸಿದಂತೆ ಪೂರೈಕೆದಾರರು ಆವಕ ಜಾವಕ‌ದ ಬಗ್ಗೆ ಮಾಹಿತಿಯನ್ನು ಪ್ರತಿದಿನ ಕಡ್ಡಾಯವಾಗಿ ನಮೂದಿಸಬೇಕು. ಅತಿಯಾದ ರಸಗೊಬ್ಬರ ಬಳಕೆಯಿಂದಾಗುವ ದುಷ್ಪರಿಣಾಮಗಳ‌ ಕುರಿತು ರೈತರಿಗೆ ತಿಳಿ ಹೇಳುವ‌ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮನವರಿಕೆ ಮಾಡಲು ತಿಳಿಸಿದರು.


ವಿಚಕ್ಷಣಾ ತಂಡ ಚುರುಕುಗೊಳಿಸಲು ನಿರ್ದೇಶನ:

ಜಿಲ್ಲಾ ವಿಚಕ್ಷಣ‌ ತಂಡಗಳು ಅತೀ ಜಾಗೃತವಾಗಿ ಕಾರ್ಯನಿರ್ವಹಿಸಬೇಕು.‌ ರಸಗೊಬ್ಬರ ಕುರಿತು ದೂರುಗಳು ಬಂದಾಗ ವಿಚಕ್ಷಣಾ ತಂಡಗಳು ತ್ವರಿತವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ನಿಖರ ವರದಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಕಳೆದ ಬಾರಿ ರಸಗೊಬ್ಬರ‌ ಹಾಗೂ ಬಿತ್ತನೆ ಬೀಜ ವಿತರಣೆಯಲ್ಲಿ ಕೃಷಿ ಇಲಾಖೆ‌ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಈ ಬಾರಿಯೂ ಅದೇ ರೀತಿ ಕಾರ್ಯನಿರ್ವಹಿಸುವಂತೆ ಆಶಯ ವ್ಯಕ್ತಪಡಿಸಿ ರಸಗೊಬ್ಬರ ಬಿತ್ತನೆ ಬೀಜ ಪೂರೈಕೆಯಲ್ಲಿ‌ ಅನಗತ್ಯ ಗೊಂದಲಗಳಿಗೆ ಆಸ್ಪದ‌ ನೀಡದೆ ಸಮರ್ಪಕವಾಗಿ ನಿರ್ವಹಿಸುವಂತೆ ಹೇಳಿದರು.

ಜಿಪಂ ಸಿಇಒ ರಾಹುಲ ಶಿಂಧೆ ಮಾತನಾಡಿ, ರೈತರು ಜಮೀನಿನಲ್ಲಿ ಯಾವ ಬೆಳೆ ಬೆಳೆಯಬೇಕು ಎನ್ನುವುದನ್ನು ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪೂರೈಕೆದಾರರು ರೈತರಿಗೆ ಉತ್ತಮ ಮಾರ್ಗದರ್ಶನ ನೀಡಬೇಕು. ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆಯಿಲ್ಲ. ರಸಗೊಬ್ಬರ, ಬಿತ್ತನೆ ಬೀಜಗಳ ಕೃತಕ‌ ಅಭಾವ ಅಥವಾ ಹೆಚ್ಚಿನ ದರಕ್ಕೆ‌ ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಸಾವಯವ ಕೃಷಿಗೆ ಒತ್ತು ನೀಡಲು ಇದು ಉತ್ತಮ ಸಮಯವಾಗಿದ್ದು, ಕೃಷಿ ಇಲಾಖೆ ಹಾಗೂ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆದಾರರು ರೈತರಲ್ಲಿ‌ ಅರಿವು ಮೂಡಿಸಬೇಕು. ರಸಗೊಬ್ಬರ ಮಾರಾಟಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು. ರಸಗೊಬ್ಬರ ಮಾರಾಟಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆ, ವಿಚಕ್ಷಣಾ ತಂಡಗಳು ನಿರಂತರವಾಗಿ ನಿಗಾ ವಹಿಸುತ್ತಿದ್ದು, ದಾಸ್ತಾನು ಹಾಗೂ ಮಾರಾಟದಲ್ಲಿ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶ ಮುರಗೋಡ, ಕೃಷಿ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು, ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆದಾರರು ಉಪಸ್ಥಿತರಿದ್ದರು.

-------ಕೋಟ್‌...

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ‌ ಜಿಲ್ಲೆಗೆ ಬೇಕಾದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಸಮರ್ಪಕ ದಾಸ್ತಾನು ಹೊಂದಿದ್ದು, ರಸಗೊಬ್ಬರ ಪೂರೈಕೆ‌ ಮಾಡುವ ಸಂಸ್ಥೆಗಳ ಪ್ರತಿನಿಧಿ ಹಾಗೂ ಸಾಗಾಣಿಕೆ ಸಂಸ್ಥೆಯವರೊಂದಿಗೆ ಸಭೆ ನಡೆಸಲಾಗಿದೆ. ಜಿಲ್ಲಾ‌ ಮಟ್ಟದಲ್ಲಿ 10 ಜನ ಹಿರಿಯ ಅಧಿಕಾರಿಗಳನ್ನೊಳಗೊಂಡ ರಸಗೊಬ್ಬರ ಮೇಲ್ವಿಚಾರಣೆ ಕೋಶವನ್ನು ರಚಿಸಿ ಮೇಲ್ವಿಚಾರಣೆಗೆ ಕ್ರಮವಹಿಸಲಾಗಿದೆ. ಕೃಷಿಯೇತರ ಚಟುವಟಿಕೆಗಳಿಗೆ ಯೂರಿಯಾ ರಸಗೊಬ್ಬರ ಬಳಕೆಯಾಗದಂತೆ ಕಟ್ಟುನಿಟ್ಟಿನ ಕ್ರ‌ಮ ಕೈಗೊಳ್ಳಲಾಗಿದೆ.

- ಎಚ್.ಡಿ.ಕೋಳೆಕರ, ಜಂಟಿ ಕೃಷಿ‌ ನಿರ್ದೇಶಕ