ಸಾರಾಂಶ
ಬ್ಯಾಡಗಿ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಅವರಲ್ಲಿರುವ ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ್ ಹಿರೇಕುಡಿ ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಕಂದಾಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಡಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾರತದಲ್ಲಿನ ಪ್ರಮುಖ ಉದ್ಯಮಗಳಿಗೆ ಮಹಿಳೆಯರೇ ಆಧಾರಸ್ತಂಭವಾಗಿದ್ದಲ್ಲದೇ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಕೌಟುಂಬಿಕ ಹೀಗೆ ಜೀವನದ ಪ್ರತಿಯೊಂದು ಸವಾಲನ್ನು ಎದುರಿಸುತ್ತಿದ್ದಾರೆ. ಹೀಗಿದ್ದರೂ ತಮ್ಮ ಬದುಕಿನಲ್ಲಿ ಅವಕಾಶಕ್ಕಾಗಿ ಅಲೆದಾಡಬೇಕಾಗಿದ್ದು, ವಿಶ್ವಾದ್ಯಂತ ಮಹಿಳಾ ಸಮಾನತೆಗಾಗಿ ಪ್ರತಿಪಾದಿಸಿದವರನ್ನು ಸ್ಮರಿಸುವಂಥ ಕೆಲಸವಾಗಬೇಕಾಗಿದೆ ಎಂದರು.ದೌರ್ಜನ್ಯಗಳಿಗೆ ಕಡಿವಾಣ ಬೀಳಲಿ: ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಕುಟುಂಬದ ಒಳಗೂ ಹೊರಗೂ ಮಹಿಳೆ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಮಹಿಳೆಯಲ್ಲಿರುವ ಪುನಶ್ಚೇತನ ಶಕ್ತಿ ಸದ್ಬಳಕೆಯಾಗುತ್ತಿಲ್ಲ. ಎಷ್ಟೇ ನೀತಿ ನಿಯಮ ಕಠಿಣ ಕ್ರಮ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ. ತನ್ನ ಅಂತ್ಯಕಾಲದವರೆಗೂ ಪುರುಷನ ಜತೆಗಿದ್ದು ತಾಯಿಯಾಗಿ, ಮಡದಿಯಾಗಿ, ಮಗಳಾಗಿ ವಿವಿಧ ಹಂತಗಳಲ್ಲಿ ಸಹಾಯಹಸ್ತ ಚಾಚುತ್ತಿರುವ ಅವರ ಮನೋಭಾವಕ್ಕೆ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.ನಿತ್ಯವೂ ಆಚರಿಸಿ: ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಇಲ್ಲಿನ ಪ್ರಮುಖ ಉದ್ಯಮಗಳನ್ನು ಪೋಷಿಸುವಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸಿದ್ದಾಳೆ. ಮಹಿಳೆಯರಲ್ಲಿರುವ ಶಕ್ತಿ, ಅನುಗ್ರಹ, ಸಾಧನೆ, ಪ್ರೀತಿ, ನಗುಮುಖಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅವರಿಗಾಗಿ ಪ್ರತಿದಿನವೂ ಮಹಿಳಾ ದಿನಾಚರಣೆ ಆಚರಿಸಿದರೂ ತಪ್ಪಿಲ್ಲ ಎಂದರು. ವಕೀಲರ ಸಂಘ ಅಧ್ಯಕ್ಷ ಎಸ್.ಎನ್. ಬಾರ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಫೀರೋಜ್ ಷಾ ಸೋಮನಕಟ್ಟಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಜಿ. ಹಿರೇಮಠ, ಸಹ ಕಾರ್ಯದರ್ಶಿ ಎನ್.ಬಿ. ಬಳಿಗಾರ, ಮಹಿಳಾ ಮತ್ತು ಮಕ್ಕಳ ಇಲಾಖೆ ಮೇಲ್ವಿಚಾರಕಿ ಸಾವಿತ್ರಿ ಬೇಲಿ, ನ್ಯಾಯವಾದಿಗಳಾದ ಭಾರತಿ ಕುಲಕರ್ಣಿ ಯಶೋಧರ ಅರ್ಕಾಚಾರಿ, ಎಸ್.ಎಚ್. ಗುಂಡಪ್ಪನವರ, ಸುರೇಶ ಕಾಟೇನಹಳ್ಳಿ, ಶ್ರೀನಿವಾಸ್ ಕೊಣ್ಣೂರ ಎಂ.ಕೆ. ಕೋಡಿಹಳ್ಳಿ ಉಪಸ್ಥಿತರಿದ್ದರು.