ಪದವೀಧರರ ಕ್ಷೇತ್ರದ ಚುನಾವಣೆ ಮುಂಬರಲಿರುವ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ವಿಧಾನ ಸಭೆ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ. ವಿಧಾನ ಪರಿಷತ್ ಗೆ ವಿದ್ಯಾವಂತರು, ಮೇಧಾವಿಗಳು ಹಾಗೂ ಜನರ ಸಮಸ್ಯೆ ಗಳನ್ನು ಅರ್ಥಮಾಡಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವವರು ಆಯ್ಕೆಯಾಗಬೇಕು.
ಕನ್ನಡಪ್ರಭ ವಾರ್ತೆ ಮಾಲೂರು
ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯು ಎನ್.ಡಿ.ಎ. ಮೈತ್ರಿಗೆ ಸವಾಲಾಗಿದ್ದು , ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಕೆ.ಕೃಷ್ಣಾ ರೆಡ್ಡಿ ಹೇಳಿದರು.ಮಡಿವಾಳ ಗೇಟ್ ಬಳಿಯ ಜೆಡಿಎಸ್ ಕಚೇರಿಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಸ್ಥಳೀಯ ಜೆಡಿಎಸ್ ಪಕ್ಷ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವೀಧರರ ಕ್ಷೇತ್ರದ ಚುನಾವಣೆ ಮುಂಬರಲಿರುವ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ವಿಧಾನ ಸಭೆ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ. ವಿಧಾನ ಪರಿಷತ್ ಗೆ ವಿದ್ಯಾವಂತರು, ಮೇಧಾವಿಗಳು ಹಾಗೂ ಜನರ ಸಮಸ್ಯೆ ಗಳನ್ನು ಅರ್ಥಮಾಡಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವವರು ಆಯ್ಕೆಯಾಗಬೇಕು. ಹೀಗಾಗಿ ವೈದ್ಯರು, ವಕೀಲರು, ಇಂಜಿನಿಯರ್ ಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಸಾಫ್ಟ್ ವೇರ್ ಉದ್ಯೋಗಿಗಳು ಸೇರಿ ಎಲ್ಲ ಪದವೀಧರ ಮತದಾರರನ್ನು ಮುಖಂಡರು ಭೇಟಿಯಾಗಿ ಮತಯಾಚನೆ ಮಾಡಬೇಕು ಎಂದರು.
ಈ ತಿಂಗಳ ೨೩ ರಂದು ಮತದಾನ ನಡೆಯಲಿರುವ ಹಿನ್ನೆಲೆ ಮತದಾರರನ್ನು ಕೊನೆಯ ಕ್ಷಣದವರೆಗೆ ಕಾಯದೆ ಮುಂಚಿತವಾಗಿಯೇ ಭೇಟಿ ಮಾಡಬೇಕು. ದಸರಾ ರಜೆ ಹಾಗೂ ಹಬ್ಬದ ಹಿನ್ನೆಲೆ ಕೆಲವರು ತಮ್ಮ ಊರುಗಳಿಗೆ ತೆರಳುವ ಸಾಧ್ಯತೆ ಇರುವುದರಿಂದ ಎಲ್ಲ ಮತದಾರನ್ನು ತಲುಪುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಮತದಾನದ ಮೊದಲ ಪ್ರಾಶಸ್ತ್ಯ ಮತವನ್ನು ಸರಿಯಾಗಿ ಚಲಾಯಿಸುವ ಕುರಿತು ಅರಿವು ಮೂಡಿಸಬೇಕು ಎಂದರು.ಎನ್.ಡಿ.ಎ. ಅಭ್ಯರ್ಥಿ ಕೆ.ಎಂ.ಸುರೇಶ್ ಅವರ ಗೆಲುವಿಗೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದ ಕೃಷ್ಣಾ ರೆಡ್ಡಿ ಅವರು, ಕೇವಲ ಸಭೆಗಳಿಗೆ ಸೀಮಿತವಾಗದೆ ಹಳ್ಳಿ- ಹಳ್ಳಿಗಳಲ್ಲಿರುವ ಮತದಾರರನ್ನು ಸಂಪರ್ಕಿಸುವ ಕೆಲಸ ಆಗಬೇಕು. ಇದು ಮುಂಬರಲಿರುವ ಪಂಚಾಯ್ತಿ ಚುನಾವಣೆಗಳಿಗೆ ಸಹಕಾರಿಯಾಗಲಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಪ್ರಭಾಕರ್ ಮಾತನಾಡಿ, ಎನ್.ಡಿ.ಎ.ಅಭ್ಯರ್ಥಿ ಕೆ.ಎಂ.ಸುರೇಶ್ ಅವರನ್ನು ಗೆಲ್ಲಿಸಲು ಕಾರ್ಯಕರ್ತರಲ್ಲದೇ ಪಕ್ಷದ ಮುಖಂಡರು ಶ್ರಮವಹಿಸಬೇಕು. ಮತದಾರರ ಬಳಿ ಮತಯಾಚನೆಗೆ ಮುಂದಾಗಬೇಕು ಎಂದರು. ಮುಖಂಡ ಜಿ.ಇ.ರಾಮೇಗೌಡ ಮಾತನಾಡಿ, ಈಗಾಗಲೇ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಪದವೀಧರರ ಮತದಾರರ ನೋಂದಣಿ ಕಾರ್ಯ ನಡೆದಿದ್ದು, ಆಯಾ ಗ್ರಾಮಗಳ ಮುಖಂಡರು ತಮ್ಮ ವ್ಯಾಪ್ತಿಯ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಮನವೊಲಿಸಬೇಕು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಸಭೆಯಲ್ಲಿ ಹಿರಿಯ ಮುಖಂಡರಾದ ವಿ.ಹನುಮಪ್ಪ, ಹರೀಶ್ ಗೌಡ, ಗೋಪಾಲ್ ಗೌಡ, ಮೈಲಾಂಡಹಳ್ಳಿ ನಾರಾಯಣಸ್ವಾಮಿ ಮಾತನಾಡಿದರು.
ಅಭ್ಯರ್ಥಿ ಪತ್ನಿ ವೀಣಾ ಸುರೇಶ್, ಶ್ವೇತಾ ವಿಜಯಕುಮಾರ್, ದೇವರಾಜ ರೆಡ್ಡಿ, ವೆಂಕಟೇಶ್ ಗೌಡ, ಮುನಿಸ್ವಾನಿ ಗೌಡ, ಗೋಪಾಲ್ ಗೌಡ, ವೆಂಕಟೇಶ್, ಎಂ.ನಾರಾಯಣಸ್ವಾಮಿ, ನಾಗರಾಜ್, ಪಿ.ಎಂ.ರಾಜಾರಾಮ್ , ರಾಮಮೂರ್ತಿ, ಶ್ರೀನಿವಾಸ್, ಆಂಜಿನಪ್ಪ ಇನ್ನಿತರರು ಇದ್ದರು.