ಮೀಸಲಾತಿ ಸಮೀಕ್ಷೆಯಲ್ಲಿ ’ಹೊಲಯ’ ಎಂದು ನಮೂದಿಸಿ: ಎ.ಆರ್.ಕೃಷ್ಣಮೂರ್ತಿ

| Published : May 05 2025, 12:49 AM IST

ಮೀಸಲಾತಿ ಸಮೀಕ್ಷೆಯಲ್ಲಿ ’ಹೊಲಯ’ ಎಂದು ನಮೂದಿಸಿ: ಎ.ಆರ್.ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮುಂದಿನ ಪೀಳಿಗೆಗೆ ಉಳಿವಿಗಾಗಿ ನಮ್ಮ ಸಮುದಾಯದವರು ಹೆಮ್ಮೆಯಿಂದ ಹೊಲೆಯ ಎಂದು ಸಮೀಕ್ಷೆ ವೇಳೆ ಬರೆಸಬೇಕು ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಮ್ಮ ಮುಂದಿನ ಪೀಳಿಗೆಗೆ ಉಳಿವಿಗಾಗಿ ನಮ್ಮ ಸಮುದಾಯದವರು ಹೆಮ್ಮೆಯಿಂದ ಹೊಲೆಯ ಎಂದು ಸಮೀಕ್ಷೆ ವೇಳೆ ಬರೆಸಬೇಕು ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು. ನಗರದ ಡಾ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ/ ಬಲಗೈ/ ಹೊಲೆಯ/ಛಲವಾದಿ ಒಳ ಮೀಸಲಾತಿ ಜಾಗೃತಿ ಸಮಿತಿ ವತಿಯಿಂದ ನಡೆದ ಒಳ ಮೀಸಲಾತಿ ಕುರಿತು ಕಾರ್ಯಾಗಾರವನ್ನು ಉದ್ಗಾಟಿಸಿ ಮಾತನಾಡಿದರು. ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಮಹರ್ ಜನಾಂಗದವರು ಮಹರ್ ಎಂದು ಬರೆಸಿಕೊಳ್ಳುವ ಮೂಲಕ ಮೀಸಲಾತಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ನಾವೆಲ್ಲರೂ ಹೊಲೆಯ ಸಮುದಾಯಕ್ಕೆ ಸೇರಿದವರು. ಹೊಲೆಯ ಎಂದರೆ ಕೆಟ್ಟ ಪದವಲ್ಲ. ಹೊಲವನ್ನು ಹೂಳುವವನು ಹೊಲೆಯ ಎಂಬರ್ಥವಾಗಿದೆ. ನಾವು ಭೂಮಿ ಉಳುಮೆ ಮಾಡುವ ಮಂದಿಯಾಗಿದ್ದೇವೆ. ಹೀಗಾಗಿ ಈ ಭಾಗದಲ್ಲಿ ಏಕ ಮಾದರಿಯಲ್ಲಿ ಹೊಲೆಯ ಎಂದು ನಮೂದಿಸುವ ಮೂಲಕ ನಮ್ಮ ಜಾತಿಯನ್ನು ಹೆಮ್ಮೆ ಹೇಳಿಕೊಳ್ಳೋಣ ಎಂದರು. ನಾವೆಲ್ಲರು ಹೊಲೆಯ ಜಾತಿಯಲ್ಲಿ ಹುಟ್ಟಿದ್ದೇವೆ. ಜಾತಿಯನ್ನು ಸುಳ್ಳು ಹೇಳುವುದು ಒಳ್ಳೆಯದಲ್ಲ. ಮುಂದಿನ ನಮ್ಮ ವಂಶಸ್ಥರಿಗೆ ನಾವೇ ಅನ್ಯಾಯ ಮಾಡಿದಂತೆ ಆಗುತ್ತದೆ. ನಾಳೆಯಿಂದ ಮನೆಗೆ ಬರುವ ಸಮೀಕ್ಷೆ ತಂಡಕ್ಕೆ ನಿಖರವಾಗಿ ಜಾತಿ ಕಲಂನಲ್ಲಿ ಹೊಲೆಯ ಎಂದು ಬರೆಸಬೇಕು ಎಂದರು.ರಾಜ್ಯ ಯೋಜನಾ ಇಲಾಖೆಯ ನಿರ್ದೇಶಕ ಡಿ.ಚಂದ್ರಶೇಖರಯ್ಯ ಮಾತನಾಡಿ, ಒಳ ಮೀಸಲಾತಿ ನೀಡುವುದಕ್ಕೆ ಹೊಲೆಯ ಸಮುದಾಯ ವಿರೋಧವಿಲ್ಲ. ನಾವು ಸಹ ಒಳ ಮೀಸಲಾತಿ ನೀಡಲು ಸಂಪೂರ್ಣ ಬೆಂಬಲ ಇದೆ. ಆದರೆ, ಸದಾಶಿವ ಆಯೋಗದಂತೆ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧವಿದೆ. ಹೀಗಾಗಿ ಈ ಜಾತಿ ಸಮೀಕ್ಷೆ ನಮ್ಮ ಮುಂದೆ ಬಂದಿದೆ ಎಂದರು. ಹೊಲೆಯ ಸಮುದಾಯವರು ನಿಖರವಾಗಿ ಜಾತಿ ಕಲಂನಲ್ಲಿ ಹೊಲೆಯ ಎಂದು ನಮೂದಿಸುವ ಮೂಲಕ ನಮ್ಮ ಜನಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಅಗತ್ಯ ಇದೆ. ಸದಾಶಿವ ಆಯೋಗವು ಬಲಗೈ ಸಮುದಾಯಕ್ಕೆ ಭಾರಿ ಅನ್ಯಾಯ ಮಾಡಿದೆ. ಕಪೋಕಲ್ಪಿತ ವರದಿಯನ್ನು ಮಂಡಿಸಿ, ಹೊಲೆಯ, ಬಲಗೈ,ಛಲವಾದಿ ಸಮುದಾಯ ಕಡಿಮೆ ಇದ್ದು, ಈ ಸಮುದಾಯಕ್ಕೆ ೫.೫ ರಷ್ಟು ಮೀಸಲಾತಿ ನೀಡಿ, ಮಾದಿಗ ಸಮುದಾಯಕ್ಕೆ ೬ ರಷ್ಟು ಮೀಸಲಾತಿ ನೀಡಿ ಎಂದು ಶಿಫಾರಸು ಮಾಡಿ, ಮೀಸಲಾತಿಯನ್ನು ಹೆಚ್ಚು ಪಡೆದುಕೊಳ್ಳುವ ಷಡ್ಯಂತರವಾಗಿತ್ತು ಎಂದು ವರದಿಯ ಸಂಪೂರ್ಣ ಅಂಕಿಅಂಶಗಳ ಕುರಿತು ಆಯೋಗವನ್ನು ತರಾಟೆಗೆ ತೆಗೆದುಕೊಂಡರು. ೧೯೦೧ರಿಂದ ನಮ್ಮ ಸಮುದಾಯದ ಜನಸಂಖ್ಯೆಯಲ್ಲಿ ಹೆಚ್ಚಾಗಿದೆ. ಮಾದಿಗ ಸಂಬಂಧಿತ ಉಪ ಜಾತಿಗಳಿಗೂ ಹೊಲೆಯ ಸಂಬಂಧಿಸಿತ ಉಪ ಜಾತಿಗಳಿಗೆ ಅರ್ಧಕ್ಕಿಂತ ಹೆಚ್ಚು ವ್ಯತ್ಯಾಸ ಬರುತ್ತಿದೆ. ಈಗ ಸದಾಶಿವ ಆಯೋಗ ನಮ್ಮ ಜಾತಿಯಲ್ಲಿರುವವರೇ ಮಾದಿಗ ಸಮುದಾಯಕ್ಕೆ ಸೇರಿಸಿ, ೮ ಲಕ್ಷ ಕ್ಕೂ ಹೆಚ್ಚು ಜನರನ್ನು ಮಾದಿಗ ಸಮುದಾಯಕ್ಕೆ ಸೇರಿಸಿ ವರದಿ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ?. ಈ ಎಲ್ಲಾ ತಪ್ಪು ಅಂಕಿಅಂಶಗಳನ್ನು ಸರ್ಕಾರ, ಸಚಿವರ ಗಮನಕ್ಕೆ ತಂದಾಗ ಅವರು ಒಳ ಮೀಸಲಾತಿ ನೀಡುವ ಮುನ್ನಾ ೧೦೧ ಜಾತಿಗಳ ಸಮೀಕ್ಷೆ ಆಗಲಿ ಎಂದು ಒತ್ತಾಯಿಸಿದರು. ನಾವು ಬುದ್ದರು ಯಾರಿಗೂ ನೋವು ಕೊಡುವವರಲ್ಲ. ಹಂಚಿ ತಿನ್ನುವ ಜನರು. ಹೀಗಾಗಿ ಯಾರಿಗೂ ಅನ್ಯಾಯವಾಗುವುದು ಬೇಡ ಎಂದರು.

ಮಾಜಿ ಸಚಿವ ಎಸ್. ಮಹೇಶ್ ಮಾತನಾಡಿ, ಹೊಲೆಯ ಸಮುದಾಯಕ್ಕೆ ಸೇರಿರುವ ನಾವೆಲ್ಲರೂ ಒಗ್ಗಟ್ಟಿನಿಂದ ಹೊಲೆಯ ಎಂದು ಬರೆಸಿಕೊಳ್ಳೋಣ. ಆದಿ ಕರ್ನಾಟಕ, ಆದಿ ದ್ರಾವಿಡ, ಅದಿ ಅಂದ್ರ ಇವೆಲ್ಲರೂ ಗುಂಪು ಸೂಚಿಸುವ ಪದವಾಗಿದೆ. ಬಲಗೈ, ಹೊಲೆಯ, ಛಲವಾದಿ ನಮ್ಮ ಆಯ್ಕೆಯಾಗಲಿ ಎಂದರು. ದಲಿತ ಮಹಾಸಭಾದ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಸಭೆಯಲ್ಲಿ ಹೊಲೆಯ ಎಂದು ಬರೆಸುವ ನಿರ್ಣಯ ಮಂಡಿಸುವ ಜೊತೆಗೆ ನಮ್ಮ ಸಮುದಾಯದ ಸಚಿವರ ವಿರುದ್ದ ಮಾತನಾಡುವ ಮಾದಿಗ ಸಮುದಾಯ ಮುಖಂಡರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದರು. ಮೈಸೂರಿನ ಉರಿಲಿಂಗಪೆದ್ದಿ ಮಠದ ಪೂಜ್ಯ ಜ್ಞಾನ ಪ್ರಕಾಶ್ ಸ್ವಾಮೀಜಿ, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಎಸ್. ಬಾಲರಾಜ್, ಜಿಪಂ ಮಾಜಿ ಸದಸ್ಯರಾದ ಆರ್. ಬಾಲರಾಜು, ನಾಗರಾಜು ಕಮಾಲ್, ಹಾಗೂ ಸಮಿತಿಯ ಸಂಚಾಲಕ ಅಯ್ಯನಪುರ ಶಿವಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಆರ್. ಮಹದೇವ್, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಸೋಮೇಶ್, ನಲ್ಲೂರು ನಾಗಯ್ಯ, ಮೂಡ್ನಾಕೂಡು ಪ್ರಕಾಶ್, ಸಿದ್ದಯ್ಯನಪುರ ನಾಗರಾಜು, ಗೋವಿಂದರಾಜು, ನಾಗರಾಜು, ನಲ್ಲೂರು ಮಹದೇವಸ್ವಾಮಿ ಇದ್ದರು.