ಸೆ. 11ರ ಸಭೆಯಲ್ಲಿ ನಿರ್ಧರಿಸುವಂತೆ ಜನಗಣತಿಯಲ್ಲಿ ನಮೂದಿಸಿ

| Published : Sep 09 2025, 01:01 AM IST

ಸೆ. 11ರ ಸಭೆಯಲ್ಲಿ ನಿರ್ಧರಿಸುವಂತೆ ಜನಗಣತಿಯಲ್ಲಿ ನಮೂದಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಒಪ್ಪಿಕೊಂಡಿರುವ ಮಠಾಧೀಶರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರು ಸೆ. 11ರಂದು ಬೆಂಗಳೂರಿನಲ್ಲಿ ಸಭೆ ಸೇರಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲಿ ನಿರ್ಧರಿಸಿರುವುದನ್ನೇ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ಬರೆಸಬೇಕು.

ಹುಬ್ಬಳ್ಳಿ: ನಾಡಿನ ವಿವಿಧ ಮಠಾಧೀಶರು ಹಾಗೂ ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಕೈಗೊಳ್ಳುವ ನಿರ್ಧಾರದಂತೆ ಸಮಾಜ ಬಾಂಧವರು ಜಾತಿ, ಉಪಜಾತಿ ಕಾಲಂನಲ್ಲಿ ಮಾಹಿತಿ ನಮೂದಿಸಬೇಕು ಎಂದು ಶಿರಹಟ್ಟಿಯ ಫಕ್ಕೀರೇಶ್ವರ ಮಠದ ಫಕೀರ ದಿಂಗಾಲೇಶ್ಬರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಒಪ್ಪಿಕೊಂಡಿರುವ ಮಠಾಧೀಶರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರು ಸೆ. 11ರಂದು ಬೆಂಗಳೂರಿನಲ್ಲಿ ಸಭೆ ಸೇರಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲಿ ನಿರ್ಧರಿಸಿರುವುದನ್ನೇ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ಬರೆಸಬೇಕು ಎಂದರು.

ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಪಂಚಪೀಠಾಧೀಶರು ಸಹಮತ ವ್ಯಕ್ತಪಡಿಸಿರುವುದು ಸ್ವಾಗತಾರ್ಹ. ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕೆಂದು ಕೆಲವರು ಬಸವ ಸಂಸ್ಕೃತಿ ಯಾತ್ರೆ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ನಡೆಸಲಿರುವ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ಜಾತಿ, ಉಪ ಜಾತಿ ಕಾಲಂನಲ್ಲಿ ಯಾವುದನ್ನು ನಮೂದಿಸಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಇದಕ್ಕೆ ಸ್ಪಷ್ಟತೆ ನೀಡುವ ಉದ್ದೇಶದಿಂದ ಮಠಾಧೀಶರು, ಮಹಾಸಭಾದ ಪದಾಧಿಕಾರಿಗಳ ಜತೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಸ್ವಾಮೀಜಿಗಳಿಗೆ ಬೆದರಿಕೆ: ಬಸವ ಸಂಸ್ಕೃತಿ ಯಾತ್ರೆಯ ನೇತೃತ್ವ ವಹಿಸಿರುವ ತೋಂಟದ ಸಿದ್ದರಾಮ ಸ್ವಾಮೀಜಿ, ಮಠದ ಅಡಿಯಲ್ಲಿ ಮೂರು ವೈದಿಕ ಪಾಠ ಶಾಲೆಗಳನ್ನು ನಡೆಸುತ್ತಿದ್ದಾರೆ. ಬಸವತತ್ವ ಪರಿಪಾಲನೆ ಮಾಡುವವರು ವೈದಿಕ ಶಾಲೆ ನಡೆಸುತ್ತಿದ್ದಾರೆ ಎಂದರೆ, ಅವರ ನಡೆನುಡಿಗೂ ಹೋಲಿಕೆಯಿಲ್ಲ. ಅಲ್ಲದೆ, ಬಸವ ಸಂಸ್ಕೃತಿಯ ಯಾತ್ರೆಯ ವೇದಿಕೆಗೆ ಕೆಲವು ಸ್ವಾಮೀಜಿಗಳನ್ನು ಹೆದರಿಸಿ, ಬೆದರಿಸಿ ಕರೆತರುತ್ತಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪ್ಪಿನ ಬೆಟಗೇರಿಯ ವಿರೂಪಾಕ್ಷ ಸ್ವಾಮೀಜಿ, ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ಮೊರಬದ ಮಹೇಶ್ವರ ಸ್ವಾಮೀಜಿ ಹಾಗೂ ಕುಂದಗೋಳದ ಬಸವಣ್ಣಜ್ಜನವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.