ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕಿನ ಕಾಡುಗೊಲ್ಲ ಜನಾಂಗವು ರಾಜ್ಯ ಸರಕಾರವು ನಡೆಸುವ ಜಾತಿ ಗಣತಿಯಲ್ಲಿ ಕಾಡುಗೊಲ್ಲ ಜನಾಂಗ ಎಂದೇ ನಮೂದಿಸಬೇಕು. ಇದಕ್ಕೆ ಗ್ರಾಮದ ಮುಖಂಡರು, ಯುವಕರು, ವಿದ್ಯಾವಂತರೂ ಸಹಕರಿಸಬೇಕು ಎಂದು ಶಿರಾ ತಾಲೂಕು ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ಅಧ್ಯಕ್ಷ ಈಶ್ವರಪ್ಪ ಹೇಳಿದರು. ಅವರು ನಗರದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ರಾಜ್ಯ ಸರಕಾರವು ಜಾತಿ ಗಣತಿ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಈ ಜನಗಣತಿಯಲ್ಲಿ ಸಾಮಾಜಿ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷೆಗೆ ಬಂದವರಿಗೆ ಸಮರ್ಪಕ ಮಾಹಿತಿ ನೀಡಬೇಕು. ಇದು ನಮ್ಮ ಮುಂದಿನ ಅಭಿವೃದ್ಧಿಗೆ ಬೇಕಾದ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದರು. ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಹಿಂದಿನ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸವರು ಘೋಷಿಸಿದರು. ನಂತರ ಸುಮಾರು ವರ್ಷಗಳ ಕಾಲ ನಿಗಮವು ಕಾರ್ಯರೂಪಕ್ಕೆ ಬಾರದಂತೆ ಹಲವರು ತಡೆದರು. ಆದರೂ ನಿಗಮ ಕಾರ್ಯರೂಪಕ್ಕೆ ಬರುವಂತೆ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣ ಅವರ ನೇತೃತ್ವದಲ್ಲಿ ನಾವು ಶ್ರಮವಹಿಸಿದ್ದರ ಫಲವಾಗಿ ಕಾರ್ಯರೂಪಕ್ಕೆ ಬಂದಿದೆ. ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವಂತೆ ನಾವು ಸರಕಾರಕ್ಕೆ ಒತ್ತಾಯಿಸಬೇಕಿದೆ. ನಮ್ಮ ಸಂಘದ ಗುರಿ ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರ್ಪಡೆ ಮಾಡುವುದೇ ಆಗಿದೆ. ಈ ನಿಟ್ಟಿನಲ್ಲಿ ಕಾಡುಗೊಲ್ಲ ಸಮುದಾಯದವರು ಒಗ್ಗಟ್ಟಿನಿಂದ ಹೋರಾಡೋಣ ಎಂದರು.ಕಾಡುಗೊಲ್ಲ ಸಂಘದ ಕಾರ್ಯದರ್ಶಿ ಚಂದ್ರಣ್ಣ ಮಾತನಾಡಿ ರಾಜ್ಯದ ೪೪ಕ್ಕೂ ಹೆಚ್ಚು ತಾಲೂಕುಗಳಲ್ಲಿ ಕಾಡುಗೊಲ್ಲ ಜನಾಂಗವಿದ್ದು, ನಾವೆಲ್ಲರೂ ಕೂಡ ಒಗ್ಗೂಡಿ ಎಸ್.ಟಿ. ಮೀಸಲಾತಿಗಾಗಿ ಹೋರಾಡಬೇಕಿದೆ. ಕಾಡುಗೊಲ್ಲ ಸಮುದಾಯದವರು ಯಾವ ಪಕ್ಷದಲ್ಲೇ ಇರಲಿ ರಾಜಕೀಯ ಹೊರತುಪಡಿಸಿ ಸಮಾಜದ ಮೀಸಲಾತಿಗಾಗಿ ಹಾಗೂ ಅಭಿವೃದ್ಧಿಗಾಗಿ ಹೋರಾಡುವುದು ನಮ್ಮ ಗುರಿಯಾಗಿರಲಿ ಎಂದರು.ಈ ಸಂದರ್ಭದಲ್ಲಿ ಕಾಡುಗೊಲ್ಲ ಮುಖಂಡರಾದ ಗೌಡಪ್ಪ, ತಿಮ್ಮಣ್ಣ, ಮುದ್ದಕ್ಕ, ಶಿವಣ್ಣ, ದೊಡ್ಡಮುದ್ದಣ್ಣ, ರಾಮಕೃಷ್ಣಪ್ಪ, ರೇವಣ್ಣ, ರಂಗಸ್ವಾಮಿ, ಮಾಗೋಡು ನಾಗರಾಜು, ಕರಿಯಪ್ಪ, ನರಸಿಂಹ, ದೊಡ್ಡಮುದ್ದಪ್ಪ, ಮದ್ದಕ್ಕನಹಳ್ಳಿ ದಾಸಪ್ಪ, ಎಂ.ಎಸ್.ಈರಣ್ಣ ಸೇರಿದಂತೆ ಹಲವರು ಹಾಜರಿದ್ದರು.