ಸಾರಾಂಶ
ಚಾಮರಾಜನಗರದಲ್ಲಿ ಜಿಲ್ಲಾಡಳಿತ ಭವನಕ್ಕೆ ಮೂಕನಪಾಳ್ಯದ ಲಂಬಾಣಿ ಮುಖಂಡರು ಭೇಟಿ ನೀಡಿ ಒಳ ಮೀಸಲಾತಿ ಜಾತಿ ಸಮೀಕ್ಷೆಯಲ್ಲಿ ಲಂಬಾಣಿ ಸಮುದಾಯಗಳಿಗೆ ಜಾತಿ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗಳು, ಉಪಜಾತಿ ಪಟ್ಟಿಯಲ್ಲಿ ಲಂಬಾಣಿ ಎಂದು ನಮೂದಿಸಲು ಸೂಚನೆ ನೀಡುವಂತೆ ಎಡಿಸಿ ಗೀತಾ ಹುಡೇದ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಒಳ ಮೀಸಲಾತಿ ನೀಡುವ ಸಂಬಂಧ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಲಂಬಾಣಿ ಸಮುದಾಯವನ್ನು ಜಾತಿ ಕಾಲಂನಲ್ಲಿ ಆದಿ ಕರ್ನಾಟಕ ಎಂದು ತಪ್ಪಾಗಿ ನಮೂದಿಸಿರುವ ಶಿಕ್ಷಕನ ವಿರುದ್ಧ ಕ್ರಮಕ್ಕೆ ತಾಲೂಕಿನ ಮೂಕನಪಾಳ್ಯ ಗ್ರಾಮದ ಲಂಬಾಣಿ ಸಮುದಾಯದ ಮುಖಂಡರು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಮೂಕನಪಾಳ್ಯದ ಲಂಬಾಣಿ ಸಮುದಾಯ ಮುಖಂಡರು ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಜೊತೆಗೆ ತಪ್ಪು ಸಮೀಕ್ಷೆ ಮಾಡುತ್ತಿರುವ ಶಿಕ್ಷಕ ರಘುಕುಮಾರ್ ವಿರುದ್ಧ ಕ್ರಮವಾಗಬೇಕು. ಸಮೀಕ್ಷೆಯ ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿಗಳು ಹಾಗೂ ಉಪ ಜಾತಿ ಕಾಲಂನಲ್ಲಿ ಲಂಬಾಣಿ ಎಂದು ನಮೂದಿಸುವಂತೆ ಸಮೀಕ್ಷೆ ತಂಡಕ್ಕೆ ಸೂಚನೆ ನೀಡಬೇಕು. ಸಮೀಕ್ಷೆಗೆ ಬರುವ ಶಿಕ್ಷಕರು ತಮ್ಮದೇ ಆದ ದಾಟಿಯಲ್ಲಿ ಸಮೀಕ್ಷೆ ಮಾಡುವ ಜೊತೆಗೆ ನಾವು ಹೇಳಿ ದಾಖಲಾತಿಗಳನ್ನು ನೀಡಿದರು ಸಹ ಒಪ್ಪುತ್ತಿಲ್ಲ. ಇದರಿಂದ ಲಂಬಾಣಿ ಸಮುದಾಯಕ್ಕೆ ಭಾರಿ ಅನ್ಯಾಯವಾಗುತ್ತದೆ ಎಂದು ತಾಪಂ ಮಾಜಿ ಸದಸ್ಯ ಪಿ.ಕುಮಾರನಾಯ್ಕ್ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ತಕ್ಷಣವೇ ಸಮಾಜ ಕಲ್ಯಾಣಾಧಿಕಾರಿ ಮುನಿರಾಜು, ಸಹಾಯಕ ಸಮಾಜ ಕಲ್ಯಾಣಾಧಿಕಾರಿ ನಂಜುಂಡೇಗೌಡರನ್ನು ಕಚೇರಿಗೆ ಕರೆಸಿ, ಸಮಾಲೋಚನೆ ಮಾಡುವ ಜೊತೆಗೆ ಪರಿಶಿಷ್ಟ ಜಾತಿಗಳ ಕಾಲಂನಲ್ಲಿ ಆದಿ ಕರ್ನಾಟಕ ಎಂದು ನಮೂದಿಸುವ ತಪ್ಪು, ಲಂಬಾಣಿ ಸಮುದಾಯಗಳು ಬಂದಾಗ ಪರಿಶಿಷ್ಟ ಜಾತಿಗಳು ಎಂದು ನಮೂದಿಸಿ, ಉಪ ಜಾತಿಯಲ್ಲಿ ಸ್ಪಷ್ಟವಾಗಿ ಲಂಬಾಣಿ ಎಂದು ಬರೆಯಬೇಕು ಎಂದು ಸೂಚನೆ ನೀಡಿದರು. ಸಮೀಕ್ಷೆ ತಂಡದ ರಘುಕುಮಾರ್‌ಗೆ ಕರೆ ಮಾಡಿ, ಲಂಬಾಣಿ ಸಮುದಾಯದ ಮುಖಂಡರು ಇಲ್ಲಿಗೆ ಬಂದಿದ್ದಾರೆ. ಇನ್ನು ಮುಂದೆ ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿಗಳು ಉಪ ಜಾತಿಯಲ್ಲಿ ಲಂಬಾಣಿ ಎಂದು ಸ್ಪಷ್ಟವಾಗಿ ನಮೂದಿಸಿ ಎಂದು ತಾಕೀತು ಮಾಡಿದರು.ಬಳಿಕ ಶಿಕ್ಷಕನಿಗೆ ಶೋಕಾಸ್ ನೋಟಿಸ್ ನೀಡುವಂತೆ ಅಪರ ಜಿಲ್ಲಾಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮುನಿರಾಜುಗೆ ಸೂಚನೆ ನೀಡಿದರು. ತಾಪಂ ಮಾಜಿ ಸದಸ್ಯ ಪಿ.ಕುಮಾರನಾಯ್ಕ್, ಮೂಕನಪಾಳ್ಯದಲ್ಲಿ ೨೦೦ಕ್ಕೂ ಹೆಚ್ಚು ಲಂಬಾಣಿ ಕುಟುಂಬಗಳಿವೆ. ನಾವೆಲ್ಲರು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಲಂಬಾಣಿ ಎಂದು ಪ್ರಮಾಣಪತ್ರವನ್ನು ಪಡೆದುಕೊಂಡಿದ್ದೇವೆ. ಶಿಕ್ಷಕ ರಘು ಕುಮಾರ್ ಆದಿ ಕರ್ನಾಟಕ ಲಂಬಾಣಿ ಎಂದು ಬರೆಯುತ್ತಿದ್ದಾರೆ. ಇದರಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ನಮಗೆ ಪ್ರಮಾಣ ಪತ್ರ ನೀಡಿರುವಂತೆ ಜಾತಿ, ಉಪ ಜಾತಿ ಕಾಲಂಗಳಲ್ಲಿ ಪರಿಶಿಷ್ಟ ಜಾತಿಗಳು ಹಾಗೂ ಲಂಬಾಣಿ ಎಂದು ಬರೆಯಲು ತಾವು ಸೂಚನೆ ನೀಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಪುಣಜನೂರು ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮಣಿನಾಯ್ಕ್, ಗ್ರಾ.ಪಂ. ಅಧ್ಯಕ್ಷ ಶಿವಿಬಾಯಿ ಗಣೇಶನಾಯ್ಕ್, ಸವಿತಾಬಾಯಿ, ಮುಖಂಡರಾದ ಗಣೇಶ್‌ನಾಯ್ಕ್,ಬಾಲಾಜಿ ನಾಯ್ಕ್, ಪಿ.ಮಹದೇವನಾಯ್ಕ, ಶಂಕರ್‌ನಾಯ್ಕ, ಡಿ, ರಾಘವೇಂದ್ರ, ಪಿ. ಮಹದೇವನಾಯ್ಕ್, ಭರತ್‌ಕುಮಾರ್ ಇತರರು ಹಾಜರಿದ್ದರು.