ಜಾತಿ ಸಮೀಕ್ಷೆಯಲ್ಲಿ ಮಾದಿಗ ಎಂದೇ ನಮೂದಿಸಿ

| Published : May 22 2025, 01:03 AM IST

ಸಾರಾಂಶ

ಮೈಸೂರು, ಬೆಂಗಳೂರು ಭಾಗದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡರ ನಮ್ಮ ಸಮದಾಯದವರು ಮೀಸಲಾತಿ ಪಡೆಯುತ್ತಿದ್ದಾರೆ, ಹೀಗಾಗಿ ಗೊಂದಲ ಏರ್ಪಟ್ಟಿದೆ

ಹುಬ್ಬಳ್ಳಿ:ರಾಜ್ಯದಲ್ಲಿ ಮಾದಿಗ ಸಮುದಾಯದವರು ಜಾತಿ ಗಣತಿ ವೇಳೆ ಮಾದರ ಬದಲು ಮಾದಿಗ ಎಂದೇ ಬರೆಸಬೇಕು ಎಂದು ಮಾಜಿ ಸಚಿವ ಎಚ್‌. ಆಂಜನೇಯ ಕರೆ ನೀಡಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರ, ತೆಲಂಗಾಣ, ಹರಿಯಾಣದಲ್ಲಿ ಮಾದಿಗ ಸಮುದಾಯದಲ್ಲಿ ಎರಡೇ ಉಪಜಾತಿಗಳಿರುವ ಕಾರಣ ಅಲ್ಲಿ ಒಳಮೀಸಲಾತಿ ಸಲೀಸಾಗಿ ಜಾರಿಯಾಗಿದೆ. ಆದರೆ, ರಾಜ್ಯದಲ್ಲಿ 72 ಉಪಜಾತಿಗಳಿರುವ ಕಾರಣ ಅದರ ಅಧ್ಯಯನ ಮಾಡಿಯೇ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ ಆಯೋಗ ರಚನೆ ಮಾಡಲಾಗಿದೆ ಎಂದರು.

ಮೈಸೂರು, ಬೆಂಗಳೂರು ಭಾಗದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡರ ನಮ್ಮ ಸಮದಾಯದವರು ಮೀಸಲಾತಿ ಪಡೆಯುತ್ತಿದ್ದಾರೆ, ಹೀಗಾಗಿ ಗೊಂದಲ ಏರ್ಪಟ್ಟಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಮಾದಿಗರು ಸಮೀಕ್ಷೆ ವೇಳೆ ಮಾದಿಗ ಎಂದೇ ನಮೂದಿಸಬೇಕು ಎಂದರು.

ರಾಜ್ಯದಲ್ಲಿ ಸಮೀಕ್ಷೆ ಈಗಾಗಲೇ ಶೇ. 60ರಷ್ಟು ಪ್ರಗತಿಯಾಗಿದೆ, ಮುಂದಿನ ದಿನಗಳಲ್ಲಿ ಈ ಕಾರ್ಯ ಇನ್ನಷ್ಟು ಚುರುಕು ಪಡೆಯಬೇಕಿದೆ. ಸದ್ಯ ಬೆಂಗಳೂರಿನಲ್ಲಿ ನಮ್ಮ ಸಮುದಾಯದ 18 ಲಕ್ಷ ಜನರಿದ್ದಾರೆ. ಸಮೀಕ್ಷೆ ಕಾರ್ಯ ಅಲ್ಲಿ ಮಂದಗತಿಯಲ್ಲಿ ನಡೆಯುತ್ತಿದೆ. ಮೊದಲು ಪರಿಶಿಷ್ಟ ಜಾತಿ ಜನರು ವಾಸಿಸುವ ಪ್ರದೇಶದಲ್ಲಿ ಸಮೀಕ್ಷಾ ಕಾರ್ಯ ಮಾಡಬೇಕಿದೆ. ಬೆಂಗಳೂರಿನ ಸರ್ವೇಯ ಸದ್ಯದ ಕಾರ್ಯ ತೃಪ್ತಿ ತಂದಿಲ್ಲ. ಅಲ್ಲಿ ಇನ್ನಷ್ಟು ವೇಗದಿಂದ ಸಮೀಕ್ಷೆ ಕಾರ್ಯ ನಡೆಯಬೇಕು. ಬೆಂಗಳೂರಿನಲ್ಲಿ ಪರಿಶಿಷ್ಟರು ಹೆಚ್ಚು ವಾಸವಿರುವ ಸ್ಥಳಗಳಿಗೆ ತೆರಳಿ ಸರ್ವೇ ಮಾಡಬೇಕು. ರಾಜ್ಯದಲ್ಲಿ ಸಮೀಕ್ಷಾ ಕಾರ್ಯ ತೃಪ್ತಿ ತಂದಿದ್ದು, ನಿಗದಿತ ಅವಧಿಯಲ್ಲಿ ಸಮೀಕ್ಷೆ ಮುಗಿಯಲಿದೆ. ಬಳಿಕ ಮೂಲ ಜಾತಿ ಆಧಾರದ ಮೇಲೆ ಒಳಮೀಸಲಾತಿ ನಿಗದಿ ಮಾಡಬೇಕು. ಒಂದು ವೇಳೆ ಪೂರ್ಣಗೊಳದಿದ್ದರೇ ಅವಧಿ ವಿಸ್ತರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬೇಡ ಜಂಗಮರು ಇಲ್ಲ: ಕರ್ನಾಟಕದಲ್ಲಿ ಬೇಡ ಜಂಗಮ ಕುಟುಂಬಗಳು ಸಂಪೂರ್ಣ ನಶಿಸಿ ಹೋಗಿವೆ. ಅವರ ಹೆಸರಲ್ಲಿ ಜಾತಿ ಪ್ರಮಾಣಪತ್ರ ನೀಡಿದವರು ಮತ್ತು ಪಡೆದವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು. ಅಲ್ಲದೆ, ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮ ತೆಗೆದು ಹಾಕಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಬಳಿಕ ಆದಿ ದ್ರಾವಿಡ ಮತ್ತು ಆದಿ ಕರ್ನಾಟಕಗಳನ್ನು, ಆದಿ ಆಂಧ್ರಗಳೆಂದು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಬೇಕು. ಮೂಲ ಜಾತಿಯ ಆಧಾರದಲ್ಲೇ ಮೀಸಲಾತಿ ನೀಡಬೇಕು ಎಂದು ಆಂಜನೇಯ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ, ಸುಜಾತಾ ದೊಡ್ಡಮನಿ, ಮೋಹನ ಆಲ್ಮೆಲ್ಕರ್, ಡಿ.ಎಂ. ದೊಡ್ಡಮನಿ, ಅಶೋಕ ದೊಡ್ಡಮನಿ, ವೆಂಕಟೇಶ ಸಗಬಾಲ, ಪರಶುರಾಮ ಪೂಜಾರ, ಪ್ರೇಮನಾಥ ಚಿಕ್ಕತುಂಬಳ ಮುಂತಾದವರು ಇದ್ದರು.