ವೀರಶೈವ ಲಿಂಗಾಯತ ಧರ್ಮ ನಮೂದಿಸಿ: ಎಂ.ಎಸ್. ಕೋರಿಶೆಟ್ಟರ

| Published : Sep 17 2025, 01:06 AM IST

ವೀರಶೈವ ಲಿಂಗಾಯತ ಧರ್ಮ ನಮೂದಿಸಿ: ಎಂ.ಎಸ್. ಕೋರಿಶೆಟ್ಟರ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತ ವೀರಶೈವ ಮಹಾಸಭಾ ಆಶ್ರಯದಲ್ಲಿ ಸೆ. 19ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಏಕತಾ ಸಮಾವೇಶ ನಡೆಯಲಿದ್ದು, ಮಹಾಸಭಾದ ಗಣ್ಯರು ಹಾಗೂ ನಾಡಿನ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ.

ಹಾವೇರಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಧರ್ಮ ಕಾಲಂನಲ್ಲಿ ಇತರೆ ಎಂದು ನಮೂದಿರುವ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮ ಎಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು ಮತ್ತು ಉಪಜಾತಿ ಕಾಲಂನಲ್ಲಿ ತಾವು ಸೇರಿದ ಉಪಜಾತಿಗಳ ಸಂಕೇತವನ್ನು ಬರೆಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಕರೆ ನೀಡಿದ್ದು, ರಾಜ್ಯದಲ್ಲಿ ಬಹುಸಂಖ್ಯಾತರಿರುವ ಸಮಾಜದ ಶಕ್ತಿಯನ್ನು ತೋರಿಸಬೇಕಿದೆ ಎಂದು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಕೋರಿಶೆಟ್ಟರ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗವು ಸೆ. 22ರಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿಯಲ್ಲಿ ಸಮಾಜದವರು ತಪ್ಪದೇ ಸಕ್ರಿಯವಾಗಿ ಪಾಲ್ಗೊಳ್ಳಬೇಕು.

ಅಖಿಲ ಭಾರತ ವೀರಶೈವ ಮಹಾಸಭಾ ಆಶ್ರಯದಲ್ಲಿ ಸೆ. 19ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಏಕತಾ ಸಮಾವೇಶ ನಡೆಯಲಿದ್ದು, ಮಹಾಸಭಾದ ಗಣ್ಯರು ಹಾಗೂ ನಾಡಿನ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಭಾಗವಹಿಸಬೇಕು.

ಸಮಾವೇಶದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ 500ಕ್ಕೂ ಅಧಿಕ ಹರ ಗುರು ವಿರಕ್ತ ಮಠಾಧೀಪತಿಗಳು, ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಶಂಕರ ಬಿದರಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.ಶಂಭು ಚಕ್ಕಡಿ, ದ್ರಾಕ್ಷಾಯಣಿ ಗಾಣಿಗೇರ, ವಿರೂಪಾಕ್ಷಪ್ಪ ಕಡ್ಲಿ, ಅನಸೂಯಮ್ಮ ಯರವಿನತಲಿ, ಅಜ್ಜನಗೌಡ ಗೌಡಪ್ಪನವರ, ಅಕ್ಕಮಹಾದೇವಿ ಭರತನೂರಮಠ ಇದ್ದರು.

ಲಿಂಗಾಯತ ಪ್ರತ್ಯೇಕ ಧರ್ಮ ಘೋಷಿಸಲಿಲಿಂಗಾಯತ ಪ್ರತ್ಯೇಕ ಧರ್ಮ ಎಂದು ಘೋಷಣೆ ಮಾಡಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ನಂತರ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತದೆ. ಈಗಲೂ ಕೇಂದ್ರದಲ್ಲಿ ಪ್ರಸ್ತಾವನೆ ಇದೆ. ಕೆಲವರು ಪ್ರಸ್ತಾವನೆ ಇಲ್ಲ, ಅದು ರದ್ದಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಕೂಡಲೇ ಘೋಷಣೆ ಮಾಡಬೇಕು ಎಂದು ಎಂ.ಎಸ್. ಕೋರಿಶೆಟ್ಟರ್ ಒತ್ತಾಯಿಸಿದರು.