ಗ್ರಾಮೀಣ ಕ್ರೀಡೆಗಳಲ್ಲಿ ಮನರಂಜನೆಯೇ ಪ್ರಧಾನ: ಕಂಸಾಗರ ಸೋಮಶೇಖರ್

| Published : Nov 01 2024, 12:06 AM IST

ಸಾರಾಂಶ

ಕಡೂರು, ಗ್ರಾಮೀಣ ಪ್ರದೇಶಗಳ ಕ್ರೀಡೆಗಳಲ್ಲಿರುವ ಮನರಂಜನೆ ಇತರೆ ಕ್ರೀಡೆಗಳಲ್ಲಿ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಂಸಾಗರ ಸೋಮಶೇಖರ್ ಹೇಳಿದರು.

ಮಚ್ಚೇರಿಯಲ್ಲಿ ವಿನಾಯಕ ಗೆಳೆಯರ ಬಳಗದಿಂದ ರಾಜ್ಯಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಕಡೂರು

ಗ್ರಾಮೀಣ ಪ್ರದೇಶಗಳ ಕ್ರೀಡೆಗಳಲ್ಲಿರುವ ಮನರಂಜನೆ ಇತರೆ ಕ್ರೀಡೆಗಳಲ್ಲಿ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಂಸಾಗರ ಸೋಮಶೇಖರ್ ಹೇಳಿದರು.

ತಾಲೂಕಿನ ಮಚ್ಚೇರಿಯಲ್ಲಿ ವಿನಾಯಕ ಗೆಳೆಯರ ಬಳಗ ಏರ್ಪಡಿಸಿದ್ದ ರಾಜ್ಯಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಸದಾ ಕಾಯಕದಲ್ಲಿರುವ ಗ್ರಾಮೀಣ ಜನರಿಗೂ ಮನರಂಜನೆ ಬೇಕು. ಅದಕ್ಕಾಗಿಯೇ ಕಬಡ್ಡಿ, ಎತ್ತಿನ ಗಾಡಿ ಮುಂತಾದ ಗ್ರಾಮೀಣ ಭಾಗದ ಕ್ರೀಡೆಗಳನ್ನು ನಮ್ಮ ಪೂರ್ವಿಕರು ಏರ್ಪಡಿಸುತ್ತಿದ್ದರು. ಇತ್ತೀಚೆಗೆ ಗ್ರಾಮೀಣ ಕ್ರೀಡೆಗಳಿಗೆ ಮಹತ್ವ ಕಡಿಮೆಯಾಗುತ್ತಿದೆ. ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು.

ಗೆಳೆಯರ ಬಳಗದ ಮುಖ್ಯಸ್ಥ ಎಂ.ಟಿ.ಮಂಜುನಾಥ್ ಮಾತನಾಡಿ, ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿ ಪ್ರತೀಕವಾಗಿದ್ದು, ಅವುಗಳ ಪುನಶ್ಚೇತನದ ನಿಟ್ಟಿನಲ್ಲಿ ಮೊದಲ ಬಾರಿಗೆ ಜೋಡೆತ್ತಿನ ಗಾಡಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ 50 ಕ್ಕೂ ಹೆಚ್ಚು ಜೋಡೆತ್ತುಗಳು ಆಗಮಿಸಿದ್ದವು.

ಪುರಸಭಾ ಸದಸ್ಯ ತೋಟದಮನೆ ಮೋಹನ್, ಸಾಗರ್, ಜಗದೀಶ್, ಮಲ್ಲೇಶ್ವರ ಗ್ರಾಮ ಪಂಚಾಯಿತಿ ಸದಸ್ಯರಾದ ಚೆನ್ನಪ್ಪ, ವಸಂತ ಕುಮಾರ್, ನಾಗಮಂಗಲ ಚೇತನ್, ಬೆಂಕಿ ರಂಗನಾಥ್, ಎಂ.ಎಸ್.ಶ್ರೀಧರ, ವಿನಾಯಕ ಗೆಳೆಯರ ಬಳಗದ ಸದಸ್ಯರು ಇದ್ದರು.

-

31ಕೆಕೆಡಿಯು2. ಕಡೂರು ತಾಲೂಕಿನ ಮಚ್ಚೇರಿಯಲ್ಲಿ ನಡೆದ ರಾಜ್ಯಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆಯನ್ನು ಕಂಸಾಗರ ಸೋಮಶೇಖರ್‌ ಉದ್ಘಾಟಿಸಿದರು.