ಸಾರಾಂಶ
ಅಜೀಜಅಹ್ಮದ್ ಬಳಗಾನೂರ
ಧಾರವಾಡ:ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಸತತವಾಗಿ ಐದನೇ ಬಾರಿಗೆ ಗೆಲುವು ದಾಖಲಿಸುತ್ತಿದ್ದಂತೆ ಸುರಿಯುತ್ತಿದ್ದ ತುಂತುರು ಮಳೆಯಲ್ಲಿಯೇ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಒಂದೆಡೆ ಪುರುಷ ಕಾರ್ಯಕರ್ತರು ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ ಮಹಿಳಾ ಕಾರ್ಯಕರ್ತೆಯರು ಕುಣಿದು ಕುಪ್ಪಳಿಸಿದರು.
ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ನಿಗದಿತ ವೇಳೆಗೆ ಮತ ಎಣಿಕೆ ಆರಂಭವಾದರೆ ಇದೇ ಸಮಯದಲ್ಲಿ ಮಳೆಯೂ ಸುರುವಿಟ್ಟಿತು. ಮತ ಎಣಿಕೆ ಮುಗಿಯುವ ವರೆಗೂ ವರುಣನ ಸಿಂಚನ ಮುಂದುವರಿಯಿತು. ಈ ವೇಳೆ ಸಾವಿರಾರು ಕಾರ್ಯಕರ್ತರು ಮತ ಎಣಿಕಾ ಕೇಂದ್ರದ ಹೊರಗೆ ಮಳೆಯಲ್ಲಿ ನೆನೆಯುವಂತಾಯಿತು. ಆದರೂ, ಕಾರ್ಯಕರ್ತರ ಉತ್ಸಾಹ ಮಾತ್ರ ಕುಂದಲಿಲ್ಲ. ಕೊನೆಗೆ ಗೆಲುವಿನ ಕಡೆಗೆ ಜೋಶಿ ನಾಗಾಲೋಟ ಹಾಕುತ್ತಿದ್ದಂತೆ ಸೇರಿದ್ದ ಕಾರ್ಯಕರ್ತರು ಬಣ್ಣದಲ್ಲಿ ಮಿಂದೆದ್ದು, ಕುಣಿದು ಕುಪ್ಪಳಿಸಿದರು. ಜೈ ಶ್ರೀರಾಮ, ಹರ ಹರಮಹಾದೇವ ಹಾಗೂ ಪ್ರಧಾನಿ ನರೇಂದ್ರ ಮೋದಿ, ಪ್ರಹ್ಲಾದ ಜೋಶಿ ಪರ ಘೋಷಣೆ ಕೂಗಿ ಅಕ್ಷರಶಃ ತಮ್ಮ ನೆಚ್ಚಿನ ನಾಯಕರ ಗೆಲವನ್ನು ಸಂಭ್ರಮಿಸಿದರು. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಹೊತ್ತು ವಿಜಯೋತ್ಸವಕ್ಕೆ ಅವಕಾಶ ನೀಡದೇ ಕಾರ್ಯಕರ್ತರನ್ನು ಚದುರಿಸಿದರು.ಅಚ್ಚುಕಟ್ಟಾದ ವ್ಯವಸ್ಥೆ:
ಮತದಾನ ಕೇಂದ್ರದಲ್ಲಿ ಯಾವುದೇ ಗದ್ದಲ-ಗೊಂದಲ ಆಗದಂತೆ ಜಿಲ್ಲಾಡಳಿತ ಸುವ್ಯವಸ್ಥೆ ಮಾಡಿತ್ತು. ಮತ ಎಣಿಕಾ ಕೇಂದ್ರದ ಒಂದು ಕಿಮೀಗೂ ದೂರದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧ ಹೇರಿ ಎಲ್ಲೆಡೆಯೂ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ಮತಎಣಿಕಾ ಕೇಂದ್ರಕ್ಕೆ ಆಗಮಿಸುವ ಪೋಲಿಂಗ್ ಏಜೆಂಟರಿಗೆ, ಮತ ಎಣಿಕೆ ಮಾಡುವ ಸಿಬ್ಬಂದಿಗಳಿಗೆ ಪ್ರತ್ಯೇಕವಾದ ಕೌಂಟರ್ ತೆರೆಯಲಾಗಿತ್ತು. ಮತ ಎಣಿಕಾ ಕೇಂದ್ರದ ಬಳಿ ಪ್ರವೇಶ ಪತ್ರವಿರುವವರಿಗೆ ಮಾತ್ರ ಬಿಡುವ ವ್ಯವಸ್ಥೆ ಮಾಡಲಾಗಿತ್ತು. ಎಣಿಕಾ ಸಿಬ್ಬಂದಿಗೆ ಹಾಗೂ ಕಾರ್ಯಕರ್ತರಿಗೆ ಪ್ರತ್ಯೇಕವಾದ ಊಟದ ಕೌಂಟರ್ ತೆರೆಯಲಾಗಿತ್ತು. ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ನೀಡದೇ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.ಬೆಳಗ್ಗೆಯಿಂದಲೇ ಆರಂಭವಾದ ತುಂತುರು ಮಳೆಯಿಂದಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದ ಪೊಲೀಸರು ಮಳೆಯಲ್ಲಿಯೇ ನಿಂತು ಹೈರಾಣಾದರು. ಕೆಲವು ಪೊಲೀಸರು ರಸ್ತೆಯ ಅಕ್ಕಪಕ್ಕದ ಮರಗಿಡಗಳ ಆಶ್ರಯ ಪಡೆದರೆ, ಮತ್ತೆ ಕೆಲವರು ಛತ್ರಿ ಹಿಡಿದುಕೊಂಡೆ ಕರ್ತವ್ಯ ನಿರ್ವಹಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು ಮಳೆಯಲ್ಲಿಯೇ ಛತ್ರಿ ಹಿಡಿದು ವಿವಿಧ ಮತ ಎಣಿಕಾ ಕೇಂದ್ರ, ಮಾಧ್ಯಮ ಕೇಂದ್ರ ಸೇರಿದಂತೆ ಆವರಣಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ಜೋಶಿ ಟೆಂಪಲ್ ರನ್:ಪ್ರಹ್ಲಾದ ಜೋಶಿ ಗೆಲುವು ಸಾಧಿಸುತ್ತಿದ್ದಂತೆ ಧಾರವಾಡದ ನುಗ್ಗಿಕೇರಿಯ ಹನುಮಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಲಕ್ಷ್ಮಿನರಸಿಂಹ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದ ಜೋಶಿ ಮುರುಘಾಮಠಕ್ಕೂ ಭೇಟಿ ನೀಡಿ ಪೀಠಾಧಿಪತಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ನಂತರ ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಭೇಟಿ ನೀಡಿ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳ ಆಶೀರ್ವಾದ ಪಡೆದರು. ತುಳಜಾಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆಯ ದರ್ಶನ ಪಡೆದರು. ಈ ವೇಳೆ ಸಚಿವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ನಂತರ ಕೇಶವಕುಂಜಕ್ಕೆ ಭೇಟಿ ನೀಡಿದ ಜೋಶಿ ಆರ್‌ಎಸ್‌ಎಸ್‌ನ ಹಿರಿಯರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಜೋಶಿ ಅವರೊಂದಿಗೆ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ ಮಸೂತಿ ಸೇರಿದಂತೆ ಹಲವರು ಸಾಥ್ ನೀಡಿದರು.