ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಹಕಾರ ಸಪ್ತಾಹ ಸಂಭ್ರಮದ ಎರಡನೇ ದಿನವಾದ ಶುಕ್ರವಾರ ನಿಶ್ಮಿತಾ ಸಮೂಹ ಸಂಸ್ಥೆಯ ಮಾಲಕ ನಾರಾಯಣ ಪಿ.ಎಂ. ಅವರಿಗೆ ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸೊಸೈಟಿ ನಿರ್ದೇಶಕ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸೊಸೈಟಿಯ ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು.ಅಭಿನಂದನಾ ಮಾತುಗಳನ್ನಾಡಿದ ಸೊಸೈಟಿ ನಿರ್ದೇಶಕ ಜಯರಾಮ ಕೋಟ್ಯಾನ್, ವೈದ್ಯರಾಗಬೇಕಿದ್ದ ನಾರಾಯಣ ಅವರು ಸಾರಿಗೆ ಉದ್ಯಮಿಯಾಗಿ ಬೆಳೆದವರು. ಸ್ನೇಹ, ಸಂಘಟನಾ ಚತುರರಾಗಿ ಹತ್ತು ಹಲವು ಸಂಘಟನೆಗಳ ಪ್ರಧಾನ ಕಾರ್ಯದರ್ಶಿಯಾಗಿ ರೋರ‍್ಯಾಕ್ಟ್ ಮೂಲಕ ಸಾಮೂಹಿಕ ಮದುವೆಗಳ ಸಂಘಟನೆ, ರೋಟರಿ ಶಿಕ್ಷಣ ಸಂಸ್ಥೆ, ಸಾರ್ವಜನಿಕ ಶ್ರೀ ಗಣೇಶೋತ್ಸವದ ಬೆಳವಣಿಗೆಯಲ್ಲಿ, ಸಾರಿಗೆ, ಹೋಟೆಲ್ ಉದ್ಯಮಿಯಾಗಿ ನಾರಾಯಣ್ ಅವರ ಕೊಡುಗೆ ಮಹತ್ವದ್ದು ಎಂದರು.
ಸಮಗ್ರ ಸಾಧಕ ಪ್ರಶಸ್ತಿಯನ್ನು ಪತ್ನಿ ಮೀನಾಕ್ಷಿ ನಾರಾಯಣ್ ಜತೆ ಸ್ವೀಕರಿಸಿ ಮಾತನಾಡಿದ ನಿಶ್ಮಿತಾ ಸಮೂಹ ಸಂಸ್ಥೆಯ ಮಾಲಕ ನಾರಾಯಣ ಪಿ.ಎಂ., ಮೂಡುಬಿದಿರೆಯಂತಹ ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಸೇವಾ ಭೂಮಿಯಲ್ಲಿ ಪಡೆದಿರುವ ಈ ಗೌರವ ಶ್ರೇಷ್ಠವಾದದ್ದು. ಹುಟ್ಟೂರಲ್ಲಿ ನಾಯಕತ್ವ ಬೆಳೆಸಿದ ಅಮರನಾಥ ಶೆಟ್ಟರನ್ನು ಮರೆಯಲಾಗದು ಎಂದರು.ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಸಂಸ್ಥೆಗಳಲ್ಲಿ ತಾಂತ್ರಿಕತೆಯ ಬಳಕೆಯೊಂದಿಗೆ ಉತ್ತಮ ಆಡಳಿತದ ನಿರೀಕ್ಷೆಯನ್ನು ಮೂಡುಬಿದಿರೆ ಸೊಸೈಟಿ ಈಗಾಗಲೇ ಸಮರ್ಪಕವಾಗಿ ನಿರ್ವಹಿಸಿದೆ ಎಂದರು.ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿದರು. ವಿವಿಧ ಸಂಘ- ಸಂಸ್ಥೆಗಳಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಘುವೀರ್ ಕಾಮತ್ ವಂದಿಸಿದರು. ಚೇತನಾ ರಾಜೇಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು.