ಸ್ಮಶಾನ ಉತಾರದಲ್ಲೂ ವಕ್ಫ್‌ ಎಂದು ನಮೂದು

| Published : Nov 08 2024, 12:36 AM IST

ಸಾರಾಂಶ

ಸ್ಮಶಾನ ಭೂಮಿ ಉತಾರವೂ ವಕ್ಫ್‌ ಹೆಸರಿಗೆ ನಮೂದಾಗಿದ್ದು, ಸಂಸ್ಕಾರ ಮಾಡುವುದಕ್ಕೆ ಹಿಂಜರಿಯುವಂತೆ ಮಾಡಿದೆ

ನರಗುಂದ: ತಾಲೂಕಿನ ಸ್ಮಶಾನ ಭೂಮಿಯ ಉತಾರದಲ್ಲಿಯೂ ಹೆಸರು ನಮೂದಾಗಿದ್ದು, ಇದರಿಂದ ಸತ್ತು ಸ್ವರ್ಗ ಸೇರಿದವರ ಕುಟುಂಬಸ್ಥರು ಎಚ್ಚೆತ್ತುಕೊಳ್ಳುವಂತಾಗಿದೆ.

ತಾಲೂಕಿನ ಚಿಕ್ಕನರಗುಂದ ಗ್ರಾಪಂ ವ್ಯಾಪ್ತಿಯ ಹುಣಸಿಕಟ್ಟಿ ರಸ್ತೆಗೆ ಹೊಂದಿಕೊಂಡಿರುವ ಸರ್ವೇ ನಂ.113ರ 4 ಎಕರೆ 1 ಗುಂಟೆ ಜಮೀನ ಕಂದಾಯ ಇಲಾಖೆಯ ಸ್ಮಶಾನ ಭೂಮಿ ಎಂದು ದಾಖಲೆಗಳಲ್ಲಿ ನಮೂದಿತ್ತು. 4 ಎಕರೆ ವಿಸ್ತೀರ್ಣದ ಸ್ಮಶಾನದಲ್ಲಿ ಮೊದಲಿಗೆ ಮುಸ್ಲಿಮರು, ನಂತರ ಕುರುಬರು, ರೆಡ್ಡಿ, ಲಿಂಗಾಯತ ಹಾಗೂ ಪರಿಶಿಷ್ಟ ಜಾತಿ, ಪಪಂ ಸೇರಿದಂತೆ ಗ್ರಾಮದ ಎಲ್ಲ ಸಮುದಾಯದವರು ಶವಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸುತ್ತಿದ್ದರು.

1975ರಿಂದ 2019ರ ವರೆಗೆ ಈ ಕಾರ್ಯ ನಿರ್ವಿಘ್ನವಾಗಿ ನಡೆದುಕೊಂಡು ಬಂದಿದೆ. ಆದರೀಗ ಕಂದಾಯ ಇಲಾಖೆ ಸ್ಮಶಾನ ಪಹಣಿ ಪತ್ರದಲ್ಲಿ 22.07.2019ರಿಂದ ಚಿಕ್ಕ ನರಗುಂದ ಮಕಾನ ವಕ್ಫ್‌ ಆಸ್ತಿ ಎಂದು ನಮೂದಾಗಿದೆ. ಪರಿಣಾಮ ಸತ್ತವರ ಕುಟುಂಬಸ್ಥರು ನಿದ್ದೆಗೆಡುವಂತೆ ಮಾಡಿದೆ, ಅಲ್ಲದೆ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

4 ಎಕರೆ ವಿಸ್ತೀರ್ಣದ ಸ್ಮಶಾನವನ್ನು ಗ್ರಾಪಂ, ಜಿಪಂ, ತಾಪಂ ಹಾಗೂ ಸ್ಥಳೀಯ ಶಾಸಕರ ವಿವಿಧ ಯೋಜನೆಗಳ ಅನುದಾನದಲ್ಲಿ ಕುಡಿಯುವ ನೀರು, ಸಿ.ಸಿ. ರಸ್ತೆ, ವಿದ್ಯುತ್, ಚಿತಾಗಾರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಚಿಕ್ಕನರಗುಂದ ಗ್ರಾಮದಲ್ಲಿರುವ 4 ಎಕರೆ 1 ಗುಂಟೆ ಸ್ಮಶಾನ ಭೂಮಿಯಲ್ಲಿ ಗ್ರಾಮದ ಪ್ರತಿಯೊಬ್ಬರು ಜಾತ್ಯತೀತವಾಗಿ ಶವ ಸಂಸ್ಕಾರ ನೆರವೇರಿಸಿಕೊಂಡು ಬಂದಿದ್ದೇವೆ. ಆದರೀಗ ಇಲ್ಲಿನ ಸ್ಮಶಾನ ಭೂಮಿ ಉತಾರವೂ ವಕ್ಫ್‌ ಹೆಸರಿಗೆ ನಮೂದಾಗಿದ್ದು, ಸಂಸ್ಕಾರ ಮಾಡುವುದಕ್ಕೆ ಹಿಂಜರಿಯುವಂತೆ ಮಾಡಿದೆ. ನರಗುಂದ ಕಂದಾಯ ಇಲಾಖೆಯಲ್ಲಿ 1975ರಿಂದ ಈ ವರೆಗಿನ ''''ಡ'''' ಉತಾರ ಮಾಹಿತಿ ಕೇಳಿದರೆ 1980ರ ರೈತ ಬಂಡಾಯದಲ್ಲಿ ಸುಟ್ಟು ಕರಕಲಾಗಿದೆ ಎಂದು ಅಧಿಕಾರಿಗಳು ಆ ಸಮಂಜಸ ಮಾಹಿತಿ ನೀಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿ, ಸರ್ಕಾರದ ಜನಪ್ರತಿನಿಧಿಗಳು ದಾಖಲಾಗಿರುವ ವಕ್ಫ್‌ ಹೆಸರನ್ನು ತಕ್ಷಣವೇ ತೆಗೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

2019ರಲ್ಲಿ ಸರ್ಕಾರ ಗೆಜೆಟ್ ಅಧಿಸೂಚನೆ ಮಾಡಿದ್ದರಿಂದ ತಾಲೂಕಿನ ಕೆಲವು ಆಸ್ತಿಗಳ ಪಹಣಿ ಪತ್ರಿಕೆಗಳಲ್ಲಿ ವಕ್ಫ್‌ ಎಂದು ನಮೂದಾಗಿದೆ. ಚಿಕ್ಕನರಗುಂದ ಗ್ರಾಮದ 4 ಎಕರೆ 1 ಗುಂಟೆ ಸ್ಮಶಾನದ ಪಹಣಿ ಪತ್ರಿಕೆಯಲ್ಲಿ ವಕ್ಫ್‌ ಎಂದು ನಮೂದಾಗಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದ್ದಾರೆ.

ಪ್ರತಿ ವರ್ಷ ಸ್ಥಳೀಯ ಗ್ರಾಪಂನಿಂದ ಇಲ್ಲಿಯ ಸ್ಮಶಾನದಲ್ಲಿ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ಪ್ರಸ್ತುತ ವಕ್ಫ್‌ ವಿವಾದದಿಂದ ಎಚ್ಚೆತ್ತುಕೊಂಡಿರುವ ಚಿಕ್ಕನರಗುಂದ ಗ್ರಾಪಂ ಗ್ರಾಮದ ರುದ್ರಭೂಮಿ ಚಾಲ್ತಿ ಉತಾರ ತೆಗೆಸಿ ನೋಡಿದಾಗ ವಕ್ಫ್‌ ಹೆಸರು ನಮೂದಾಗಿರುವುದು ಬೆಳಕಿಗೆ ಬಂದಿದೆ ಎಂದು ಮಾಜಿ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಹೇಳಿದ್ದಾರೆ.