ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ದೇವರು, ಧರ್ಮ, ಧ್ವಜ ಬಣ್ಣಗಳನ್ನು ಹಣ ಮತ್ತು ಅಧಿಕಾರಕ್ಕಾಗಿ ದುರ್ಬಳಕೆ ಮಾಡಿಕೊಂಡ ಪರಿಣಾಮವೇ ಹನುಮ ಧ್ವಜ ಬಂದು ಕೆರಗೋಡು ಗ್ರಾಮವನ್ನು ಛಿದ್ರ ಮಾಡಿದ್ದು, ಅಲ್ಲಿಗೆ ದೆವ್ವ ಪಿಚಾಚಿಗಳು ಪ್ರವೇಶ ಮಾಡಿವೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಶಾಂತಿ ಸೌಹಾರ್ದತೆ ಸಹಬಾಳ್ವೆಗಾಗಿ ಪ್ರಗತಿಪರರು ನಡೆಸಿದ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದರು. ಸಂತರ ನುಡಿಗಟ್ಟಿನಂತೆ ಐಕ್ಯತೆಯೇ ದೈವ, ಛಿದ್ರತೆಯೇ ದೆವ್ವ. ಹಾಗಾಗಿ ಜಿಲ್ಲೆಯಲ್ಲಿ ಛಿದ್ರತೆ ಮತ್ತು ಭಿನ್ನಭಾವ ಹೆಚ್ಚುತ್ತಿದೆ ಎಂದರೆ ದೆವ್ವ ಮತ್ತು ಪಿಚಾಚಿಗಳು ಪ್ರವೇಶ ಮಾಡಿವೆ ಎಂದರ್ಥ. ಇದನ್ನು ಮಂಡ್ಯ ನೆಲದಲ್ಲಿ ಯಾರೂ ಸಹ ನಿರೀಕ್ಷಿಸಲಿಲ್ಲ ಎಂದು ಹೇಳಿದರು.
ಕೆರಗೋಡು ಪ್ರಕರಣದ ವಿಚಾರದಲ್ಲಿ ಅದನ್ನು ನೋಡುವುದು ಬೇಡ, ನಮ್ಮನ್ನು ನಾವು ನೋಡಿಕೊಳ್ಳೋಣ. ನಾವೆಲ್ಲರೂ ಸೇರಿ ಏನೇನು ಮಾಡಬೇಕಿತ್ತು. ಎಷ್ಟೆಷ್ಟು ಮಾಡಬೇಕಿತ್ತು. ಅದನ್ನು ಮಾಡಲಿಲ್ಲ, ಅದರ ಪರಿಣಾಮವೇ ಪ್ರಕರಣ ನಡೆದಿದೆ, ಅವರು ಪಂಜು ಹಿಡಿದುಕೊಂಡು ಸಮಾಜದಲ್ಲಿ ಬೆಂಕಿ ಹಚ್ಚಲು ಬಂದರೆ ನಾವು ಮನೆ ಮನೆಗಳಲ್ಲಿ ಸಹಬಾಳ್ವೆಯ ಹಣತೆಯ ಬೆಳಕು ಬೆಳಗಿಸೋಣ ಎಂದು ತಿಳಿಸಿದರು.ಹಿಂದುತ್ವ ಅನುಷ್ಠಾನ ಬಿಜೆಪಿ ಅಜೆಂಡಾ:
೨೦೨೪ರ ಲೋಕಸಭೆ ಚುನಾವಣೆ ಎದುರಾಗುತ್ತಿದೆ, ಆರ್‌ಎಸ್‌ಎಸ್‌ನ ಗೋಳ್ವರ್ಕರ್ ಚಾತುರ್ವರ್ಣ ಸಮಾಜವೇ ದೇವರು ಎಂದಿದ್ದರು. ಇದನ್ನೇ ಸಾವರ್ಕರ್ ಹಿಂದುತ್ವ ಅನ್ನುತ್ತಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನೇ ಅನುಷ್ಠಾನ ಮಾಡಲು ಹೊರಟಿದೆ. ಶೂದ್ರರು, ದುಡಿಯುವ ಜನರು ಮೇಲ್ವರ್ಗದ ಜನತೆಗೆ ಸೇವಕರಾಗಿರಬೇಕು, ಕಾಲಾಳುಗಳಾಗಿರಬೇಕು ಎಂಬುದೇ ಇವರ ಮರ್ಮ. ಇದನ್ನು ಜನತೆಗೆ ಮನದಟ್ಟು ಮಾಡಿಕೊಡಬೇಕಾಗಿದೆ ಎಂದು ಪ್ರತಿಪಾದಿಸಿದರು.ಜನಾಂದೋಲನಗಳ ಕಾಲು ಕತ್ತರಿಸಿದಂತೆ:
ಆರ್‌ಎಸ್‌ಎಸ್‌ನ ಬಿಜೆಪಿ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಜನಸಮುದಾಯಗಳಿಗೆ ದನಿಯಾಗುವ, ಆಸರೆಯಾಗುವ ಜನಾಂದೋಲನಗಳ ಕಾಲು ಕತ್ತರಿಸಲಾಗುತ್ತದೆ, ಕುಂಟುತ್ತ ನಡೆಯುತ್ತಿರುವ ಮಾಧ್ಯಮಗಳನ್ನ ತೆವಳುತ್ತಾ ನಡೆಯುವಂತೆ ಮಾಡಲಾಗುತ್ತದೆ, ಇವರದ್ದು ಆಡಿದ್ದೆ ಆಟ, ನಡೆದಿದ್ದೆ ದಾರಿ ಎಂಬಂತೆ ಒಂಟಿ ಸಲಗನಂತೆ ಓಡಾಡುತ್ತಿರುವ ಇಂತಹವರು ಅಧಿಕಾರಕ್ಕೆ ಬಂದರೆ ಜನರಿಗೆ ಉಳಿಗಾಲ ಉಂಟೆ ಎಂದು ಪ್ರಶ್ನಿಸಿದರು.ದೇವೇಗೌಡರಿಗೆ ಈ ಸ್ಥಿತಿ ಬರಬಾರದಾಗಿತ್ತು:
ಜಾತ್ಯತೀತ ಜನತಾದಳ ಪಕ್ಷ ಜಾತ್ಯಾತೀತವನ್ನು ತುಳಿದು ಚಾತುರ್ವರ್ಣ ಸಮಾಜವನ್ನೇ ತನ್ನ ದೇವರು ಅಂದುಕೊಂಡ ರಾಷ್ಟ್ರೀಯ ಸಂಘ ಪರಿವಾರದ ಬಿಜೆಪಿ ಪಕ್ಷವನ್ನು ಆಲಂಗಿಸಿಕೊಂಡ ಹಿನ್ನೆಲೆಯಲ್ಲಿ ನೈತಿಕವಾಗಿ ಪತನವಾಗಿದ್ದು ಅಷ್ಟೇ ಅಲ್ಲದೆ ಜೆಡಿಎಸ್‌ನ ಬೆನ್ನು ಮತ್ತು ತಲೆಯ ಮೇಲೆ ಸಂಘ ಪರಿವಾರ, ಬಿಜೆಪಿ ಛಿದ್ರಕಾರಿ ಶಕ್ತಿ ಸವಾರಿ ಮಾಡುತ್ತಿವೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ತಿಳಿಸಿದರು.ಪ್ರಧಾನಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ ಎಚ್.ಡಿ. ದೇವೇಗೌಡರಿಗೆ ಇಂತಹ ಪರಿಸ್ಥಿತಿ ಬರಬಾರದಾಗಿತ್ತು, ಅವರು ಮಕ್ಕಳು ಮತ್ತು ಸೊಸೆಯಂದಿರ ದಿಗ್ಬಂಧನದಲ್ಲಿ ಇದ್ದಾರೆ, ಅವರ ಮನೆತನದಿಂದ ಇಂತಹ ಅನಾಹುತ ಆಗಬಾರದಿತ್ತು ಈಗ ಜಾತ್ಯತೀತ ಜನತಾದಳ ಜಾತ್ಯತೀತವಾಗಿ ಉಳಿದಿಲ್ಲ ಎಂದು ವಿಷಾದಿಒಸಿದರು.
ಬಿಜೆಪಿ ಜೊತೆಗೂಡಿ ಜೆಡಿಎಸ್ ಮುನ್ನಡೆದಿದ್ದೆ ಕೆರಗೋಡು ಹನುಮ ಧ್ವಜ ಪ್ರಕರಣ ನಡೆಯಲು ಕಾರಣವಾಗಿದೆ, ಮಂಡ್ಯ ನೆಲದ ಸೊಗಡನ್ನು ಅರಿಯಲು ದೇವೇಗೌಡರ ಮನೆತನ ಸೋತಿದೆ ಎಂದು ಆರೋಪಿಸಿದರು.ಈ ವೇಳೆ ಪ್ರೊ. ಕಾಳೇಗೌಡ ನಾಗವಾರ, ಜಿ.ಎನ್. ನಾಗರಾಜ್, ರಾಮಚಂದ್ರಪ್ಪ, ಜಗದೀಶ್‌ಕೊಪ್ಪ, ಎಂ.ಮಾಯಿಗೌಡ, ಗಾಯಕ ಜನಾರ್ಧನ್, ಆನಂತ್‌ನಾಯಕ, ದಸಂಸ ಸಂಚಾಲಕ ಗುರುಪ್ರಸಾದ್ ಕೆರಗೋಡು, ಸುನಂದ ಜಯರಾಮ್, ಸುರೇಂದ್ರ ಕೌಲಗಿ, ಪ್ರೊ. ಹುಲ್ಕೆರೆ ಮಹದೇವ, ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ ಮತ್ತಿತರರು ಪಾಲ್ಗೊಂಡಿದ್ದರು.೧೫ಕೆಎಂಎನ್‌ಡಿ-೩
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಶಾಂತಿ ಸೌಹಾರ್ದತೆ ಸಹಬಾಳ್ವೆಗಾಗಿ ಪ್ರಗತಿಪರರು ನಡೆಸಿದ ಧರಣಿಯಲ್ಲಿ ಭಾಗಿಯಾಗಿದ್ದ ಪ್ರಗತಿಪರರು.