ರೈತ ಬಶೀರಅಹ್ಮದ್ ಹುನಗುಂದ ಅವರ ಜಂಟಿ ಮಾಲ್ಕಿಯಲ್ಲಿರುವ ಜಮೀನುಗಳ ಪಹಣಿ ಪತ್ರಗಳಲ್ಲಿ "ವಕ್ಫ್ ಆಸ್ತಿ " ಎಂದು ನಮೂದಿಸಿ ಆಸ್ತಿ ಕಬಳಿಸಲು ಸಂಚು ರೂಪಿಸಲಾಗಿದೆ.
ನವಲಗುಂದ:
ತಾಲೂಕಿನ ರೈತ ಬಶೀರಅಹ್ಮದ್ ಹುನಗುಂದ ಅವರ ಜಂಟಿ ಮಾಲ್ಕಿಯಲ್ಲಿರುವ ಜಮೀನುಗಳ ಪಹಣಿ ಪತ್ರಗಳಲ್ಲಿ "ವಕ್ಫ್ ಆಸ್ತಿ " ಎಂದು ನಮೂದಿಸಿ ಆಸ್ತಿ ಕಬಳಿಸಲು ಸಂಚು ರೂಪಿಸಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ಆರ್ಟಿಐ ಕಾರ್ಯಕರ್ತ ಮಾಬುಸಾಬ್ ಯರಗುಪ್ಪಿ ತಿಳಿಸಿದರು.ಮಾಧ್ಯಮಗಳ ಎದುರು ದೂರಿನ ಪ್ರತಿ ತೋರಿಸಿ ಮಾತನಾಡಿದ ಅವರು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಕಂದಾಯ ಇಲಾಖೆ ಹಾಗೂ ವಕ್ಫ್ ಮಂಡಳಿಯ ಉನ್ನತ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿಸಿದರು .
ನವಲಗುಂದ ತಾಲೂಕಿನ ಸರ್ವೇ ನಂಬರ್ 3/2+3/2 ಮತ್ತು 3/2+3/1 ರ ಜಮೀನುಗಳು ದಶಕಗಳಿಂದ ರೈತರ ಸ್ವಾಧೀನದಲ್ಲಿದ್ದವು. 2017-18ರ ಅವಧಿಯ ವರೆಗೆ ದಾಖಲೆಗಳು ರೈತರ ಹೆಸರಿನಲ್ಲೇ ಇದ್ದವು. ಆದರೆ, ವಕ್ಫ್ ಕಾಯ್ದೆ 1995ರ ನಿಯಮಗಳನ್ನು ಗಾಳಿಗೆ ತೂರಿ, ಭೂಮಾಲೀಕರಿಗೆ ನೋಟಿಸ್ ನೀಡದೆ ಪಹಣಿಯ ಕಾಲಂ ನಂ. 9 ಮತ್ತು 11 ರಲ್ಲಿ "ವಕ್ಫ್ ಆಸ್ತಿ " ಎಂದು ಅಕ್ರಮವಾಗಿ ದಾಖಲಿಸಲಾಗಿದೆ. ರೈತರಿಗೆ ನೋಟಿಸ್ ನೀಡದೇ ಇರುವುದನ್ನು ನವಲಗುಂದ ತಹಸೀಲ್ದಾರ್ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯೇ ಒಪ್ಪಿಕೊಂಡಿದ್ದಾರೆ ಎಂದರು.ಈ ಹಿಂದೆ ಜನಾಕ್ರೋಶಕ್ಕೆ ಹೆದರಿ ''''''''ವಕ್ಫ್ ಹೆಸರು ಸೇರ್ಪಡೆ ಆದೇಶ'''''''' ಹಿಂಪಡೆಯುವ ಭರವಸೆ ನೀಡಲಾಗಿತ್ತು. ಆದರೆ, ಆದೇಶ ಹೊರಬಂದು ಎರಡು ವರ್ಷ ಕಳೆದರೂ ಇಂದಿಗೂ 35ಕ್ಕೂ ಹೆಚ್ಚು ಬಡ ರೈತರ ಪಹಣಿಗಳಲ್ಲಿ ವಕ್ಫ್ ಹೆಸರು ಹಾಗೇ ಮುಂದುವರಿದಿದ್ದು, ಇದು ರೈತರ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದೆ ಎಂದು ದೂರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಗಜೆಟ್ ಅಧಿಸೂಚನೆಯಲ್ಲಿ ಹೆಸರಿದೆ ಎಂಬ ಕಾರಣಕ್ಕೆ ದಶಕಗಳಿಂದ ಖಾಸಗಿ ವ್ಯಕ್ತಿಗಳ ಸ್ವಾಧೀನದಲ್ಲಿರುವ ಆಸ್ತಿಯನ್ನು ''''''''ವಕ್ಫ್ ಆಸ್ತಿ'''''''' ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶ ಮಾಡಿದ್ದರೂ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಬಡವರ ಆಸ್ತಿ ಕಬಳಿಸಲು ಈ ಸಂಚು ರೂಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಲೋಕಾಯುಕ್ತರು ತಕ್ಷಣವೇ ಮಧ್ಯಪ್ರವೇಶಿಸಿ, ಪಹಣಿಗಳಲ್ಲಿ ಕಾನೂನುಬಾಹಿರವಾಗಿ ಸೇರಿಸಲಾಗಿರುವ ''''''''ವಕ್ಫ್ ಆಸ್ತಿ'''''''' ಎಂಬ ಹೆಸರನ್ನು ರದ್ದುಗೊಳಿಸಿ, ರೈತರ ಹೆಸರನ್ನು ಮೊದಲಿನಂತೆ ಮರುಸ್ಥಾಪಿಸಲು ಕಂದಾಯ ಇಲಾಖೆಗೆ ಆದೇಶಿಸಬೇಕು ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸಚಿವರು ಮತ್ತು ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ. ಪ್ರಸ್ತುತ ಈ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತದಲ್ಲಿ ಅಧಿಕೃತ ಕೇಸ್ ನಂಬರ್ (ಕಂಪ್ಲೇಟ್/ಲೋಕ್/ಬಿಜೆಎಂ/6512/2026) ದಾಖಲಾಗಿದೆ ಎಂದರು.