ಹಾಸನದ ಮೊಸಳೆಹೊಸಳ್ಳಿ ಕಾಲೇಜಿನಲ್ಲಿ ಪರಿಸರ ದಿನ ಆಚರಣೆ

| Published : Jun 08 2024, 12:32 AM IST

ಸಾರಾಂಶ

ಹಾಸನ ತಾಲೂಕಿನ ಮೊಸಳೆಹೊಸಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸಾಮಾಜಿಕ ಅರಣ್ಯ ವಿಭಾಗ ಜಂಟಿಯಾಗಿ ಪರಿಸರ ದಿನವನ್ನು ಆಚರಿಸಲಾಯಿತು.

ವಿವಿಧ ಜಾತಿ ಹಣ್ಣು, ಹೂ ಸಸಿ ನೆಟ್ಟ ಅರನ್ಯ ಇಲಾಖೆ

ಹಾಸನ: ತಾಲೂಕಿನ ಮೊಸಳೆಹೊಸಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸಾಮಾಜಿಕ ಅರಣ್ಯ ವಿಭಾಗ ಜಂಟಿಯಾಗಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು ಹಾಗೂ ಹೂವಿನ ಸಸಿಗಳನ್ನು ನೆಡಲಾಯಿತು.

ಮುಖ್ಯ ಅತಿಥಿಗಳಾಗಿ ವಕೀಲ, ಪರಿಸರ ಸಂರಕ್ಷಕ ಹಾಗೂ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎ.ಕಿಶೋರ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ಮಾತುಗಳನ್ನು ಹಂಚಿಕೊಂಡರು. ‘ಪಶ್ಚಿಮ ಘಟ್ಟವು ವಿಶ್ವದಲ್ಲೇ ಅತಿ ಹೆಚ್ಚು ಜೀವವೈವಿಧ್ಯತೆಯನ್ನು ಹೊಂದಿರುವ ತಾಣಗಳಲ್ಲಿ ಒಂದಾಗಿದೆ. ಇದನ್ನು ಕಾಪಾಡುವ ಕರ್ತವ್ಯ ನಮ್ಮದಾಗಿದೆ. ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಕಾಡನ್ನು ಸಂರಕ್ಷಣೆ ಮಾಡುವುದು ಕೂಡ ಒಂದಾಗಿದೆ. ಇಂದಿನ ತಾಪಮಾನ ಏರಿಕೆಗೆ ಮೂಲ ಕಾರಣ ಮಾನವನೇ ಆಗಿದ್ದಾನೆ. ವ್ಯವಸ್ಥೆ ಸರಿಹೋಗದಿದ್ದರೆ ಮಾನವನ ಅಂತ್ಯ ಕಟ್ಟಿಟ್ಟ ಬುತ್ತಿ, ಆದ್ದರಿಂದ ಪರಿಸರವನ್ನು ಉಳಿಸುವ ಮತ್ತು ಬೆಳೆಸುವ ಮಾರ್ಗ ಅನುಸರಿಸಬೇಕು’ ಎಂದು ಹೇಳಿದರು.

ಪರಿಸರವಾದಿ ಕೆ.ವೈ.ಕೊಪ್ಪೂರಕರ್ ಮಾತನಾಡಿ, ತಮ್ಮ ನಿವೃತ್ತಿ ಜೀವನವನ್ನು ಹೇಗೆ ಪರಿಸರ ಕಾಳಜಿಯ ಕಡೆ ವಹಿಸಿ, ಜಿಲ್ಲೆಯಲ್ಲಿನ ಎಂಟು ತಾಲೂಕುಗಳೂ ಸೇರಿ ಒಟ್ಟು ಸಾವಿರ ಸಸಿಗಳನ್ನು ನೆಡುವ ಯೋಜನೆಯ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ಕೂಡ ಪ್ರಕೃತಿಯ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂದರು.

ಸಂಸ್ಥೆಯ ಪ್ರಾಂಶುಪಾಲ ಡಾ.ಟಿ.ರಂಗಸ್ವಾಮಿ ಮಾತನಾಡಿ, ವಿಶ್ವ ಪರಿಸರ ದಿನ ಜೂನ್ 5 ಕ್ಕೆ ಮಾತ್ರ ಸೀಮಿತವಾಗಿದೆ. ಪ್ರಕೃತಿಯನ್ನು ಪ್ರೀತಿಸುವುದು ಹಾಗೂ ಬೆಳೆಸುವುದು ನಿತ್ಯ ನಿರಂತರವಾಗಬೇಕು. ಇಂದಿನ ಹವಾಮಾನ ವೈಪರೀತ್ಯಗಳಿಗೆ ತೆರೆ ಎಳೆಯಬೇಕಾದರೆ ಪರಿಸರವನ್ನು ಬೆಳೆಸಬೇಕು ಎಂದರು.

ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜು ಆವರಣದಲ್ಲಿ ಸುಮಾರು 250ಕ್ಕೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು. ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.