ಸಾರಾಂಶ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನನ್ನ ಗಿಡ ನನ್ನ ಭೂಮಿ ತಂಡ ಹಾಗೂ ವಿವಿಧ ಪರಿಸರ ಸಂಘಟನೆಗಳ ಸಹಯೋಗದೊಂದಿಗೆ ಜ್ಞಾನ ಯೋಗಾಶ್ರಮದ ಮಾರ್ಗದರ್ಶನದಲ್ಲಿ ನಗರದ ಬರಟಗಿ ರಸ್ತೆಯ ಪೂನಮ್ ನಗರದಲ್ಲಿ 200ಕ್ಕೂ ಅಧಿಕ ಸಸಿ ಹಚ್ಚಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನನ್ನ ಗಿಡ ನನ್ನ ಭೂಮಿ ತಂಡ ಹಾಗೂ ವಿವಿಧ ಪರಿಸರ ಸಂಘಟನೆಗಳ ಸಹಯೋಗದೊಂದಿಗೆ ಜ್ಞಾನ ಯೋಗಾಶ್ರಮದ ಮಾರ್ಗದರ್ಶನದಲ್ಲಿ ನಗರದ ಬರಟಗಿ ರಸ್ತೆಯ ಪೂನಮ್ ನಗರದಲ್ಲಿ 200ಕ್ಕೂ ಅಧಿಕ ಸಸಿ ಹಚ್ಚಲಾಯಿತು.ಜ್ಞಾನ ಯೋಗ ಆಶ್ರಮದ ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಉಳಿದರೆ ಮಾತ್ರ ಮನುಕುಲದ ಉಳಿವು ಅದಕ್ಕಾಗಿ ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಪೂಜ್ಯಶ್ರೀ ಈಶಪ್ರಸಾದ ಮಹಾಸ್ವಾಮಿಗಳು ಗುರುದೇವಶ್ರಮ ಅಥರ್ಗಾ ಅವರು ಮಾತನಾಡಿ, ಜಾಗತಿಕ ತಾಪಮಾನ ಇದೀಗ ಹೆಚ್ಚಾಗಿದೆ. ಹೀಗಾಗಿ ನಾವು ಇಂದು ಗಿಡ-ಮರಗಳ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ನನ್ನ ಗಿಡ ನನ್ನ ಭೂಮಿ ತಂಡದ ಸಂಚಾಲಕ ಬಸವರಾಜ ಬೈಚಬಾಳ, ಸಿದ್ದೇಶ್ವರ ಶ್ರೀಗಳ ಪರಿಸರ ಕಾಳಜಿಯೇ ನಮ್ಮ ತಂಡಕ್ಕೆ ಪ್ರೇರಣೆ ಮತ್ತು ಶಕ್ತಿ . ಹಾಗಾಗಿ ಅವರು ನಡೆದಾಡಿದ ಈ ಜಾಗವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವುದು ನಮ್ಮ ಸಂಕಲ್ಪ ಎಂದರು.
ತಂಡದ ಸದಸ್ಯರಾದ ಸಿದ್ದರಾಮ ಕರಲಗಿ ಸ್ವಾಗತಿಸಿದರು. ಉದಯ ನಾವಲಗಿ ನಿರೂಪಿಸಿದರು. ನೀಲಕಂಠ ವಾಲಿಕಾರ ವಂದಿಸಿದರು. ಕಾರ್ಯಕ್ರಮದಲ್ಲಿ ತಂಡದ ಸಹ ಸಂಚಾಲಕ ಮಂಜು ಆಸಂಗಿ, ಶಶಿಧರ ರೂಡಗಿ, ಗಿರೀಶ ಪಾಟೀಲ, ಶರಣಬಸು ಕುಂಬಾರ, ಪ್ರವೀಣ ಕೂಡಗಿ, ರವಿ ಬಿರಾದಾರ, ಆನಂದ ಅಥಣಿ, ವಿಜು ಬೋಸ್ಲೆ, ವೀರೇಶ ಮುದುಕಾಮಠ ಸೇರಿದಂತೆ 300ಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ವಿವಿಧ ಸಂಘಟನೆಗಳಿಂದ ಉಪಸ್ಥಿತರಿದ್ದರು.