ಮಾನವನ ದುರಾಸೆಗೆ ಪರಿಸರ ನಾಶ

| Published : Jun 06 2024, 12:32 AM IST

ಸಾರಾಂಶ

ನಗರೀಕರಣ, ಆಧುನೀಕರಣದ ನೆಪದಲ್ಲಿ ಅರಣ್ಯವನ್ನು ಹಾಗೂ ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಇದರಿಂದ ಮರಗಳ ಹನನ ನಡೆಯುತ್ತಿದೆ. ಪರಿಸರದ ನಾಶದಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುತ್ತವೆ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಮಾನವನ ಅತಿಯಾಸೆ, ನಗರೀಕರಣದ ಉದ್ದೇಶದಿಂದ ಇಂದು ದಿನೇ ದಿನೇ ಪರಿಸರ ನಾಶವಾಗುತ್ತಿದೆ. ಇದರಿಂದ ಮುಂದಿನ ಪೀಳಿಗೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಂದೊಂದು ದಿನ ಮರದ ನೆರಳಿಗೂ ದುಡ್ಡು ಕೊಡಬೇಕಾದ ಸ್ಥಿತಿ ಬರಬಹುದು ಎಂದು ಪ್ರಾದೇಶಿಕ ಅರಣ್ಯದ ವಲಯ ಅರಣ್ಯಾಧಿಕಾರಿ ಪೂರ್ಣಿಕ ರಾಣಿ ತಿಳಿಸಿದರು.

ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನಗರೀಕರಣ, ಆಧುನೀಕರಣದ ನೆಪದಲ್ಲಿ ಅರಣ್ಯವನ್ನು ಹಾಗೂ ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಇದರಿಂದ ಮರಗಳ ಹನನ ನಡೆಯುತ್ತಿದೆ. ಪರಿಸರದ ನಾಶದಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಸಸಿ ನೆಟ್ಟು ಬೆಳೆಸಿ:

ಒಂದು ಕಡೆ ಅತಿಯಾದ ಮಳೆಯಿಂದಾಗಿ ಅತಿವೃಷ್ಟಿಯಾದರೇ, ಮತ್ತೊಂದು ಕಡೆ ಮಳೆಯಿಲ್ಲದೇ ಅನಾವೃಷ್ಟಿ ಯಾಗುತ್ತದೆ. ಪರಿಸರ ಮುನಿಸಿಕೊಂಡರೇ ಇಡೀ ಜಗತ್ತೇ ನಾಶವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಣೆ ಮಾಡಲು ಮುಂದಾಗಬೇಕೆಂದು ಸಲಹೆ ನೀಡಿದರು.

ಬಳಿಕ ನ್ಯೂ ಪಬ್ಲಿಕ್ ಶಾಲೆಯ ಅಧ್ಯಕ್ಷೆ ಮಂಜುಳಾ ರಾಜಶೇಖರ್ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ತಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಈ ವೇಳೆ ಅರಣ್ಯ ಇಲಾಖೆಯ ಕನಕರಾಜು, ಸಿ.ಆರ್.ಪಿ ರಾಜಪ್ಪ, ನ್ಯೂ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಖಲೀಲ್, ಶಿಕ್ಷಕರಾದ ಅಂಬರೀಶ್, ಅನ್ಸರ್, ಫಿರ್ದೋಸ್, ಶ್ರಾವಣಿ, ರೋಹಿಣಿ, ಚೈತ್ರಾ ಸೇರಿದಂತೆ ಹಲವರು ಇದ್ದರು.