ಮನುಷ್ಯನ ಅತಿಯಾಸೆಯಿಂದ ಪರಿಸರ ವಿನಾಶ: ನ್ಯಾಯಾಧೀಶ ಆರ್.ಯಶವಂತ ಕುಮಾರ್‌

| Published : Sep 12 2024, 01:48 AM IST

ಸಾರಾಂಶ

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಶಿಕಾರಿಪುರ ಪಟ್ಟಣದ ಅರಣ್ಯ ಇಲಾಖೆ ಆವರಣದಲ್ಲಿರುವ ಹುತಾತ್ಮ ಎಚ್.ಬಸವಣ್ಣಿರವರ ಸ್ಮಾರಕಕ್ಕೆ ನ್ಯಾಯಾಧೀಶ ಯಶವಂತಕುಮಾರ್,ಅವಿನಾಶ್‌ ಘಾಳಿ ಗೌರವ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಮನುಷ್ಯನ ಅತಿಯಾದ ದುರಾಸೆಯಿಂದಾಗಿ ಪರಿಸರ ನಾಶ ಅವ್ಯಾಹತವಾಗಿದ್ದು, ಪ್ರಕೃತಿಯ ವಿಕೋಪದಿಂದಾಗಿ ಇತ್ತೀಚೆಗೆ ಕೇರಳದ ವಯನಾಡು ಘಟನೆಯಿಂದ ಸಮಸ್ತ ಮನುಕುಲ ಪಾಠ ಕಲಿತು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಇಲ್ಲಿನ ಜೆಎಂಎಫ್‌ ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಆರ್.ಯಶವಂತ ಕುಮಾರ್‌ ಕಳವಳ ವ್ಯಕ್ತಪಡಿಸಿದರು.

ಬುಧವಾರ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಪಟ್ಟಣದ ಅರಣ್ಯ ಇಲಾಖೆ ಆವರಣದ ಲ್ಲಿರುವ ಹುತಾತ್ಮ ಎಚ್.ಬಸವಣ್ಣಿ ರವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು

ಮನುಷ್ಯ ಕಾನೂನನ್ನು ಉಲ್ಲಂಘಿಸಿದಲ್ಲಿ ಶಿಕ್ಷೆ ಆಗಬಹುದು ಅಥವಾ ಸಾಕ್ಷಿಗಳ ಲಭ್ಯತೆವಿಲ್ಲದೆ ಶಿಕ್ಷೆಯಿಂದ ಖುಲಾಸೆ ಆಗಬಹುದು,ಆದರೆ ಅರಣ್ಯ ಮತ್ತು ಪರಿಸರ ನಾಶದಂತಹ ನೈಸರ್ಗಿಕ ನಿಯಮದ ವಿರುದ್ಧ ಮನುಷ್ಯ ಹೋದಾಗ ಅದರ ಪರಿಣಾಮ ತುಂಬಾ ಭೀಕರವಾಗಿರುತ್ತದೆ.ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು ಮನುಷ್ಯನ ಅತಿಯಾದ ದುರಾಸೆಯಿಂದಾಗಿ ಪರಿಸರ ನಾಶ ವಿಪರೀತವಾಗಿದ್ದು ಸಮತೋಲನ ಕಳೆದುಕೊಂಡ ಪ್ರಕೃತಿ ವಿಕೋಪಕ್ಕೆ ಕೇರಳ ವಯನಾಡು ಘಟನೆ ತಾಜಾ ಉದಾಹರಣೆಯಾಗಿದೆ.ಇಂತಹ ಘಟನೆಗಳಿಂದ ಸಮಸ್ತ ಮನುಕುಲ ಪಾಠ ಕಲಿತು ಎಚ್ಚೆತ್ತು ಕೊಳ್ಳಬೇಕಿದೆ ಎಂದರು.

ಪರಿಸರದ ರಕ್ಷಣೆಗಾಗಿ ಹುತಾತ್ಮರಾದವರು ಪ್ರಾತಃಸ್ಮರಣೀಯರಾಗಿದ್ದು,ಅವರ ಪರಿಸರದ ಬಗೆಗಿನ ಕಾಳಜಿ ಆದರ್ಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ನಿಜವಾಗಿ ನಾವು ಹುತಾತ್ಮರಿಗೆ ಕೊಡುವ ಗೌರವವಾಗಿದೆ ಹಾಗೂ ಪ್ರಕೃತಿಯನ್ನು ಉಳಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಧಾನ ಒಂದು ಮತ್ತು ಎರಡನೇ ಪ್ರಭಾರ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಅವಿನಾಶ್ ಘಾಳಿ ಮಾತನಾಡಿ,ಅರಣ್ಯ ಸಿಬ್ಬಂದಿಗಳು ಯೋಧರ ರೀತಿ.ಸೈನಿಕರು ಗಡಿರಕ್ಷಣೆಗಾಗಿ ಬಲಿದಾನ ಮಾಡಿದರೆ,ಅರಣ್ಯ ಸಿಬ್ಬಂದಿಗಳು ಅರಣ್ಯ,ಪರಿಸರ ರಕ್ಷಣೆಗಾಗಿ ಬಲಿದಾನ ಮಾಡಿದ್ದಾರೆ,ಅವರ ಜ್ಞಾಪಕಾರ್ಥವಾಗಿ ಈ ದಿನ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು,ಅವರ ಬಲಿದಾನ ಸಾರ್ಥಕವಾಗಬೇಕಾದರೆ ನಾವು ಅವರ ಆಶಯದಂತೆ ಅರಣ್ಯ ಪರಿಸರ ರಕ್ಷಣೆ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ನಮನ ಸಲ್ಲಿಸಿ ಕ್ಷಣ ಕಾಲ ಮೌನಾಚರಣೆ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕಾರಿಪುರ ಉಪ ವಿಭಾಗದ ಎ.ಸಿ.ಎಫ್.ಎಸ್ ವಿ ರವೀಂದ್ರ ನಾಯ್ಕ್ ವಹಿಸಿದ್ದರು. ವಲಯ ಅರಣ್ಯ ಸಂರಕ್ಷಣಾಧಿಕಾರಿ ರೇವಣಸಿದ್ದಯ್ಯ ಬಿ ಹಿರೇಮಠ,ಶಾಂತಪ್ಪ ಪೂಜಾರ್,ಶಗುಫ್ತ್ ಶೇಕ್,ಅಶ್ವಿನ್ ಕುಮಾರ್ ಎಸ್ ವಿ,ತಾ.ಕಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಜರಿದ್ದರು.