ಸಾರಾಂಶ
ಪ್ರತಿ ಮನೆಗೊಂದು ಮರ, ಊರಿಗೊಂದು ವನ ಇರಬೇಕು, ಈ ಬಗ್ಗೆ ಗಮನಹರಿಸಿ, ಪ್ರತಿಯೊಬ್ಬರೂ ಗಿಡ ನೆಟ್ಟು ಪಾಲನೆ ಪೋಷಣೆ ಮಾಡಬೇಕು
ಗದಗ: ಗಾಳಿ, ನೀರು, ಭೂಮಿ ಸೇರಿದಂತೆ ಪರಿಸರ ಮಾಲಿನ್ಯವಾಗುವುದರಿಂದ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಹೀಗಾಗಿ ಗಿಡಮರ ಬೆಳೆಸುವ ಮೂಲಕ ನಮ್ಮ ಪರಿಸರದ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಹೇಳಿದರು.
ಅವರು ತಾಲೂಕಿನ ಸಮೀಪದ ಬಿಂಕದಕಟ್ಟಿ ಗ್ರಾಮದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜನ-ವನ-ಒಬ್ಬರಿಗೊಂದು ಮರ ಧ್ಯೇಯ ವಾಕ್ಯದೊಂದಿಗೆ ಪ್ರತಿ ತಾಲೂಕಿನಲ್ಲಿ 10 ಸಾವಿರಕ್ಕೂ ಅಧಿಕ ಗಿಡ ನೆಡುವುದರ ಮೂಲಕ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಪ್ರತಿ ಮನೆಗೊಂದು ಮರ, ಊರಿಗೊಂದು ವನ ಇರಬೇಕು, ಈ ಬಗ್ಗೆ ಗಮನಹರಿಸಿ, ಪ್ರತಿಯೊಬ್ಬರೂ ಗಿಡ ನೆಟ್ಟು ಪಾಲನೆ ಪೋಷಣೆ ಮಾಡಬೇಕು. ರೈತರು ತಮ್ಮ ಜಮೀನಿನ ಬದುಗಳಲ್ಲಿ ಮರಗಳನ್ನು ಹೆಚ್ಚಾಗಿ ಬೆಳೆಸಬೇಕು. ಕಾಡಿನ ಸಂರಕ್ಷಣೆ, ಗಿಡ ಮರಗಳನ್ನು ಬೆಳೆಸುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ, ಅದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ ಎಸ್.ಶೆಟ್ಟಿ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಕಾಶಿಮ್ ಚೂರಿಖಾನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿಪಂ ಸಿಇಓ ಭರತ್ ಎಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಸಿಜೆಎಂ ಜಿ.ಆರ್. ಶೆಟ್ಟರ್, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಎಸ್.ಎಸ್. ತಳವಾರ, 1ನೇ ಜೆಎಂಎಫ್‌ಸಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಬಿ.ವೈ. ಕರಗುದರಿ, 2ನೇ ಜೆಎಂಎಫ್‌ಸಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶೆ ದೀಪ್ತಿ ನಾಡಗೌಡ, 3ನೇ ಜೆಎಂಎಫ್‌ಸಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಭೀಮಪ್ಪ ಪೋಳ, 4ನೇ ಜೆಎಂಎಫ್‌ಸಿ ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಬೀರಪ್ಪ ಕಾಂಬಳೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿಪಾಟೀಲ, ಕಾರ್ಯದರ್ಶಿ ಬಿ.ಎಚ್. ಮಾಡಲಗೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ ಮೀನಾ ಪ್ರಾಸ್ತಾವಿಕ ಮಾತನಾಡಿದರು, ಬಾಹುಬಲಿ ಜೈನರ ನಿರೂಪಿಸಿದರು.