ಸಾರಾಂಶ
ಹೊಸಪೇಟೆ: ದೇಶದಲ್ಲಿ ನರೇಂದ್ರ ಮೋದಿ ಪ್ರಭಾವ ಹಾಗೂ ಜನಪ್ರಿಯತೆ ಕಡಿಮೆಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಒಂದೂವರೆ ಲಕ್ಷ ಮತಗಳಿಂದ ಗೆದ್ದಿರುವುದೇ ಸಾಕ್ಷಿ. ಇದನ್ನು ನೋಡಿದರೆ ಜನರು ಮೋದಿಯವರನ್ನು ತಿರಸ್ಕರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್ ಆರೋಪಿಸಿದರು.ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಕೊಂಡನಾಯಕನಹಳ್ಳಿಯ ಜಿಲ್ಲಾ ಕಚೇರಿಯಲ್ಲಿ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕಾರಾಂ ಅವರ ಗೆಲುವಿಗಾಗಿ ಶ್ರಮಿಸಿದ ಜಿಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ, ಮುಖಂಡರಿಗೆ ಸನ್ಮಾನ ಕಾರ್ಯಕ್ರಮದ ನಂತರ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರ ಒಗ್ಗಟ್ಟಿನ ಫಲದಿಂದ ಈ ಅಭೂತಪೂರ್ವ ಗೆಲುವು ಸಾಧ್ಯವಾಗಿದೆ. ಪಕ್ಷ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿಯನ್ನು ಕೊಟ್ಟಿರುವುದು ಸಹ ಗೆಲುವಿಗೆ ಕಾರಣವಾಗಿದೆ ಎಂದರು.
ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಪಕ್ಷದ ವೋಟಿಂಗ್ ಶೇ.9ರಷ್ಟು ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಮತದಾರರ ಋಣ ತೀರಿಸುತ್ತೇವೆ ಎಂದರು.ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಬಾರದಿರುವುದಕ್ಕೆ ಅನೇಕ ಕಾರಣಗಳಿವೆ. ಇದಕ್ಕೆ ಸ್ಥಳೀಯ ಶಾಸಕರು ಸರಿಯಾಗಿ ಸ್ಪಂದಿಸಿಲ್ಲ ಎನ್ನುವ ಕೂಗಿದೆ. ಇದನ್ನು ವರಿಷ್ಠರ ಗಮನಕ್ಕೆ ತರಲಾಗುವುದು. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು ಮುಂಬರುವ ಜಿಪಂ, ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ, ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಉಪಾಧ್ಯಕ್ಷ ಕೆ.ರಮೇಶ, ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ, ಸೇವಾದಳ ಜಿಲ್ಲಾ ಸಂಘಟಕ ಮಾರೆಣ್ಣ, ಮುಖಂಡರಾದ ತಮ್ಮನ್ನಳಪ್ಪ, ಬಣ್ಣದ ಮನೆ ಸೋಮಶೇಖರ್, ಸಣ್ಣಮಾರೆಪ್ಪ, ಎಚ್.ಮಹೇಶ್ , ಕೊಟಗಿನಾಳ ಮಲ್ಲಿಕಾರ್ಜುನ , ಸಂಗಪ್ಪ, ಯರಿಸ್ವಾಮಿ, ಮರಡಿ ಮಂಜುನಾಥ , ವಿನಾಯಕ ಶೆಟ್ಟರ್, ಸಿ. ಖಾಜಾ ಹುಸೇನ್, ಬಾಣದ ಗಣೇಶ್, ಜೆ.ಶಿವಕುಮಾರ, ದೇವರಮನೆ ಕನ್ನೇಶ್ವರ, ಚಾಂದ್, ತಾಯಪ್ಪ, ಧನ್ ರಾಜ್, ಗೋಪಾಲಕೃಷ್ಣ, ತಾರಾ ಬಾಷಾ ,ಪೀರಾ ಸಾಬ್, ಖಾಜಾ ಹುಸೇನ್, ಪರಶುರಾಮ, ನಾಗ ರಾಜ್ ಮತ್ತಿತರರಿದ್ದರು.