ಪರಿಸರ ಮಾಲಿನ್ಯ: ಇಂಡೇನಾ ಕಾರ್ಖಾನೆ ವಿರುದ್ಧ ಪ್ರತಿಭಟನೆ

| Published : May 05 2024, 02:03 AM IST

ಸಾರಾಂಶ

ದೊಡ್ಡಬಳ್ಳಾಪುರ: ಕಾರ್ಖಾನೆಯಿಂದ ಬರುವ ತ್ಯಾಜ್ಯ ಅನಿಲ ದುರ್ವಾಸನೆಯಿಂದ ಕೂಡಿದ್ದು, ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬಿರುತ್ತಿದೆ. ಇಂಡೇನಾ ಕಾರ್ಖಾನೆ ಗ್ರಾಮದ ನೈಸರ್ಗಿಕ ಪರಿಸ್ಥಿತಿ ಮೇಲೆ ಮಾರಕ ಪರಿಣಾಮ ಬೀರುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ರಸಾದ್ ಆರೋಪಿಸಿದರು.

ದೊಡ್ಡಬಳ್ಳಾಪುರ: ಕಾರ್ಖಾನೆಯಿಂದ ಬರುವ ತ್ಯಾಜ್ಯ ಅನಿಲ ದುರ್ವಾಸನೆಯಿಂದ ಕೂಡಿದ್ದು, ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬಿರುತ್ತಿದೆ. ಇಂಡೇನಾ ಕಾರ್ಖಾನೆ ಗ್ರಾಮದ ನೈಸರ್ಗಿಕ ಪರಿಸ್ಥಿತಿ ಮೇಲೆ ಮಾರಕ ಪರಿಣಾಮ ಬೀರುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ರಸಾದ್ ಆರೋಪಿಸಿದರು.

ತಾಲೂಕಿನ ರಘುನಾಥಪುರ ಸಮೀಪದ ಇಂಡೇನಾ ಕಾರ್ಖಾನೆ ಮುಂಭಾಗ ಸ್ಥಳೀಯ ಯುವ ಹೋರಾಟಗಾರರು ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿ, ಗ್ರಾಮದ ಪರಿಸರದ ಉಳಿವಿಗಾಗಿ ಯುವಕರು ಹೋರಾಟ ನಡೆಸುತ್ತಿದ್ದು. ಕಾರ್ಖಾನೆಯ ಮಲಿನ ಗಾಳಿಯಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ದ್ರವರೂಪದ ತಾಜ್ಯವನ್ನು ಇಂಗು ಗುಂಡಿಗಳ ಮೂಲಕ ಭೂಗರ್ಭಕ್ಕೆ ಸೇರಿಸುತ್ತಿದ್ದು, ಅಂತರ್ಜಲ ಹಾಳಾಗುತ್ತಿದೆ. ಸದರಿ ಕಾರ್ಖಾನೆಯು ತನ್ನ ಅಧಿಕಾರದ ಬಲದಿಂದಾಗಿ ನೂರಾರು ವರ್ಷಗಳ ಇತಿಹಾಸವಿರುವ ದೇವಾಲಯವನ್ನು ಒತ್ತುವರಿ ಮಾಡಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.

ಗ್ರಾಮಸ್ಥ ಜಗದೀಶ್ ಮಾತನಾಡಿ, ಹಲವು ವರ್ಷಗಳಿಂದ ಈ ಸಮಸ್ಯೆಯನ್ನು ಸ್ಥಳೀಯ ಗ್ರಾಮಸ್ಥರು ಎದುರಿಸುತ್ತಿದ್ದು, ಕಾರ್ಖಾನೆ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಮಕ್ಕಳು ಹೊಟ್ಟೆನೋವು, ವಾಂತಿ, ತಲೆನೋವು ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಗ್ರಾಮದಲ್ಲಿ ಅಭಿವೃದ್ಧಿ ಬದಲಾಗಿ ಅನಾರೋಗ್ಯ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಕಾರ್ಖಾನೆ ಸಿಬ್ಬಂದಿ ಕೊಳವೆ ಬಾವಿಗಳ ಮೂಲಕ ವಿಷ ಪೂರಿತ ದ್ರವತಾಜ್ಯವನ್ನು ಭೂಮಿ ಸೇರುವಂತೆ ಮಾಡುತ್ತಿದ್ದು ಈ ಕಾರಣದಿಂದಾಗಿ ಸ್ಥಳೀಯವಾಗಿ ನೀರಿನ ಗುಣಮಟ್ಟ ಹಾಳಾಗಿದೆ. ಕಾರ್ಖಾನೆ ಹೊರ ಸೂಸುವ ದುರ್ವಾಸನೆಯಿಂದ ಗ್ರಾಮಸ್ಥರ ಉಸಿರಾಟಕ್ಕೆ ತೊಂದರೆಯಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.

ಈ ವೇಳೆ ಆರ್‌ಟಿ ಕೃಷ್ಣಮೂರ್ತಿ, ರಮೇಶ್, ಕಿರಣ್, ರವಿಕುಮಾರ್ ಸೇರಿದಂತೆ ಯುವ ಮುಖಂಡರು ಉಪಸ್ಥಿತರಿದ್ದರು.

4ಕೆಡಿಬಿಪಿ8-

ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ ಬಳಿಯ ಇಂಡೇನಾ ಕಾರ್ಖಾನೆ ವಿರುದ್ಧ ಸ್ಥಳೀಯ ಯುವಕರು ಪ್ರತಿಭಟನೆ ನಡೆಸಿದರು.