ಸಾರಾಂಶ
ಪರಿಸರ ಮಾಲಿನ್ಯ ತಡೆಗಟ್ಟಲು ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದ್ದ ಕಾಪು ತಾಲೂಕಿನ ಪಡು ಗ್ರಾಮದ ಫಿಶ್ ಫ್ಯಾಕ್ಟರಿಯನ್ನು ಕಾಪು ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಮುಟ್ಟುಗೋಲು ಹಾಕಿದೆ.
ಕನ್ನಡಪ್ರಭ ವಾರ್ತೆ ಕಾಪು
ಪರಿಸರ ಮಾಲಿನ್ಯ ತಡೆಗಟ್ಟಲು ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದ್ದ ಕಾಪು ತಾಲೂಕಿನ ಪಡು ಗ್ರಾಮದ ಫಿಶ್ ಫ್ಯಾಕ್ಟರಿಯನ್ನು ಕಾಪು ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಮುಟ್ಟುಗೋಲು ಹಾಕಿದೆ.ಈ ಕಾರ್ಖಾನೆಯ ಮೇಲಿನ ದೂರಿನಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು, ಫ್ಯಾಕ್ಟರಿಯು ಪರಿಸರಕ್ಕೆ ಮಾರಕವಾದ ತ್ಯಾಜ್ಯಗಳನ್ನು ಹೊರಕ್ಕೆ ಬಿಡುತ್ತಿದೆ. ಆದ್ದರಿಂದ ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬಹಳ ವರ್ಷಗಳ ಹಿಂದೆಯೇ ಶಿಫಾರಸು ಮಾಡಿತ್ತು. ಇದೀಗ ಉಡುಪಿ ಜಿಲ್ಲಾಧಿಕಾರಿ ಅವರು ಈ ವರದಿಯ ಆಧಾರದ ಮೇಲೆ ಈ ಫಿಶ್ ಫ್ಯಾಕ್ಟರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತಹಸೀಲ್ದಾರ್‌ಗೆ ಆದೇಶ ಮಾಡಿದ್ದರು. ಅದರಂತೆ ಕಾಪು ತಹಸೀಲ್ದಾರ್ ಡಾ. ಪ್ರತಿಭಾ ಕ್ರಮ ಕೈಗೊಂಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಪ್ರತಿಮಾ, ಉದ್ಯಮ, ಅಭಿವೃದ್ದಿ ಎಷ್ಟು ಮುಖ್ಯವೋ ಪರಿಸರ ರಕ್ಷಣೆಯೂ ಅಷ್ಟೇ ಮುಖ್ಯ. ನೆಲಜಲದ ರಕ್ಷಣೆ ನಮ್ಮ ಆದ್ಯತೆ. ಈ ಫ್ಯಾಕ್ಟರಿಯ ಮೇಲಿನ ಕ್ರಮ ಇತರ ಫ್ಯಾಕ್ಟರಿಗಳ ಮಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಕೀರ್ತಿಕುಮಾರ್, ಕಂದಾಯ ಪರಿವೀಕ್ಷಕ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ವೆಂಕಟೇಶ್, ಮೆಸ್ಕಾಂ ಅಧಿಕಾರಿ, ಪೊಲೀಸ್ ಅಧಿಕಾರಿ, ಪುರಸಭಾ ಅಧಿಕಾರಿ ಉಪಸ್ಥಿತರಿದ್ದರು.