ಪರಿಸರ ಸಂರಕ್ಷಣೆ, ನಿರ್ವಹಣೆ ಎಲ್ಲರ ಜವಾಬ್ದಾರಿ

| Published : May 23 2024, 01:03 AM IST

ಪರಿಸರ ಸಂರಕ್ಷಣೆ, ನಿರ್ವಹಣೆ ಎಲ್ಲರ ಜವಾಬ್ದಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವ ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈಗ ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಕಲುಷಿತಗೊಂಡಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಾವು ವಾಸಿಸುವ ಪರಿಸರವು ಭೂಮಿಯ ಮೇಲಿನ ಎಲ್ಲ ಜೀವಿಗಳನ್ನು ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪರಿಸರ ರಕ್ಷಿಸುವುದು ಮತ್ತು ನಿರ್ವಹಿಸುವುದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಮಹಮದ್ ರೋಷನ್ ಷಾ ತಿಳಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಚಿಕ್ಕಬಳ್ಳಾಪುರ, ನಗರಸಭೆ ಮತ್ತು ಮೆಸರ್ಸ್ ಟೈಟಾನ್‌ ಕಂಪನಿ ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ಜಿಲ್ಲಾ ವಕೀಲರಸಂಘ, ಶಾಂತಿನಿಕೇತನ್ ಪದವಿ ಪೂರ್ವಕಾಲೇಜ್ ಇವರ ವತಿಯಿಂದ ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಬಿ.ಬಿ.ರಸ್ತೆಯಲ್ಲಿರುವ ಬ್ರಾಹ್ಮಣರ ಸಂಘದ ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಚಾಲನೆ ನೀಡಿದರು.

ಇರುವುದೊಂದೇ ಭೂಮಿ

ನಾವು ನಮ್ಮ ಪರಿಸರವನ್ನು ಅರ್ಥಮಾಡಿಕೊಳ್ಳುವ ಜತೆಗೆ ಸಾಧ್ಯವಿರುವ ಎಲ್ಲ ರೀತಿಯಲ್ಲೂ ಅದನ್ನು ರಕ್ಷಿಸಲು ಶ್ರಮಿಸುವ ಅತ್ಯಗತ್ಯ. ಅರಿವಿದ್ದರೆ ಸಾಲದು; ನಾವು ಭೂಮಿ ಮತ್ತು ಅದರ ಸಂಪನ್ಮೂಲಗಳ ಬಗ್ಗೆ ಈ ಅರಿವು ಮತ್ತು ಗೌರವವನ್ನು ಹರಡಬೇಕು. ನಮ್ಮ ಜಗತ್ತನ್ನು ನಮಗೆ ಮತ್ತು ಭವಿಷ್ಯದ ಪೀಳಿಗೆಗೆ ಅದ್ಭುತ ಸ್ಥಳವನ್ನಾಗಿ ಮಾಡಲು ಒಟ್ಟಾಗಿ ಕೆಲಸ ಮಾಡೋಣ. ಇರುವುದು ''ಒಂದೇ ಭೂಮಿ'' ಆ ಭೂಮಿಯನ್ನು ಉಳಿಸೋಣ ಎಂದರು.

ಮಾನವ ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈಗ ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ.ಇದು ನಿಲ್ಲಬೇಕು ಎಂದು ಹೇಳಿದರು.

ನೀರಿನ ಮೂಲಗಳನ್ನು ರಕ್ಷಿಸಿ

ನಮ್ಮ ಹಿರಿಯರು ನಮಗೆ ನೀಡಿರುವ ನೀರಿನ ಮೂಲಗಳಾದ ಕೆರೆ,ಕುಂಟೆ, ಬಾವಿ, ಕಲ್ಯಾಣಿ ಗಳನ್ನು ನಾವು ಉಪಯೋಗಿಸದೆ ಅವು ಪಾಳು ಬಿದ್ದಿವೆ. ಅವುಗಳನ್ನು ಸ್ವಚ್ಛಗೊಳಿಸಿ, ಪುನಶ್ಚೇತಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿ, ಪರಿಸರ ರಕ್ಷಣೆಯ ಪ್ರಮಾಣ ವಚನವನ್ನು ಭೋಧಿಸಿದರು.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿಯ ಜಿಲ್ಲಾ ಪರಿಸರ ಅಧಿಕಾರಿ ಟಿ.ಎಮ್. ಸಿದ್ದೇಶ್ವರ ಬಾಬು ಮಾತನಾಡಿ,ವಿಶ್ವ ಪರಿಸರ ದಿನ 2024 ಅನ್ನು ಜೂನ್ 5, 2024 ರಂದು “ ಭೂಮಿಯ ಪುನಃಸ್ಥಾಪನೆ, ಬರ ಸ್ಥಿತಿಸ್ಥಾಪಕತ್ವ ಮತ್ತು ಮರುಭೂಮಿಕರಣದ ಪ್ರಗತಿಯನ್ನು ವೇಗಗೊಳಿಸುವುದು ” ಎಂಬ ವಿಷಯದೊಂದಿಗೆ ಆಚರಿಸಲಾಗುತ್ತದೆ ಎಂದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ, ಪರಿಸರ ದಿನಾಚರಣೆಯ ಮುಖ್ಯ ಉದ್ದೇಶ, ಪರಿಸರದ ಬಗ್ಗೆ ಪ್ರತಿ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನ ತಡೆಯುವುದಾಗಿದೆ ಎಂದರು.

ಈ ವೇಳೆ 1ನೇ ಹೆಚ್ಚುವರಿಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಬಿ.ಶಿವಪ್ರಸಾದ್ ,ನಗರಸಭೆ ಪೌರಾಯುಕ್ತ ಮಂಜುನಾಥ್,ಪರಿಸರ ಅಭಿಯಂತರ ಉಮಾಶಂಕರ್,ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಮುರಳಿಮೋಹನ್, ಪ್ಯಾನಲ್ ವಕೀಲರಾದ ಮಂಜುನಾಥರೆಡ್ಡಿ, ಸೌಜನ್ಯ ಗಾಂಧಿ, ನಗರಸಭಾ ಸದಸ್ಯರಾದ ಅಂಬರೀಶ್, ಗಜೇಂದ್ರ, ಮಹಾಕಾಳಿಬಾಬು, ಬೋಧಕರು, ವಿದ್ಯಾರ್ಥಿಗಳು, ಮತ್ತಿತರರು ಇದ್ದರು.