ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಹೆಚ್‍.ಸಿ.ಮಹದೇವಪ್ಪ

| Published : Jun 06 2024, 12:30 AM IST

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಹೆಚ್‍.ಸಿ.ಮಹದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರವನ್ನು ಹಾಳು ಮಾಡುತ್ತಿರುವ ನಮ್ಮಲ್ಲೇ ಅದಕ್ಕೆ ಪರಿಹಾರವೂ ಇದೆ. ಪ್ಲಾಸ್ಟಿಕ್ ಮಾನವನ ಬಹುದೊಡ್ಡ ಅನ್ವೇಷಣೆ ಆದರೆ ಅದರ ಸರಿಯಾದ ಬಳಕೆ ಹಾಗೂ ಮರುಬಳಕೆಯಿಂದ ಪರಿಸರವನ್ನು ರಕ್ಷಿಸಬಹುದು. ತ್ಯಾಜ್ಯ ವಸ್ತುಗಳ ಸರಿಯಾದ ನಿರ್ವಹಣೆ ನೀರಿನ ಸರಿಯಾದ ನಿರ್ವಹಣೆಯಿಂದ ಪರಿಸರ ರಕ್ಷಣೆ ಸಾಧ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಹೆಚ್‍.ಸಿ. ಮಹದೇವಪ್ಪ ತಿಳಿಸಿದರು.

ತಾಲೂಕು ಅರಣ್ಯ ಇಲಾಖೆ, ವಕೀಲರ ಸಂಘ ಹಾಗೂ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆ ಇವರ ಸಹಯೋಗದಲ್ಲಿ ಕಿರಂಗೂರಿನ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

1973 ಜೂನ್ 5 ರಂದು ವಿಶ್ವ ಸಂಸ್ಥೆ ಪರಿಸರ ದಿನವನ್ನಾಗಿ ಘೋಷಿಸಿದ್ದು. ಪರಿಸರ ಸಂರಕ್ಷಣೆಗಾಗಿ 143 ದೇಶಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ. ಆದರೂ ಜಾಗತಿಕ ತಾಪಮಾನ ಹೆಚ್ಚುತ್ತಿರುವುದು ಕಳವಳಕಾರಿ ಎಂದು ವಿಷಾದಿಸಿದರು.

ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಪರಿಸರವನ್ನು ಹಾಳು ಮಾಡುತ್ತಿರುವ ನಮ್ಮಲ್ಲೇ ಅದಕ್ಕೆ ಪರಿಹಾರವೂ ಇದೆ. ಪ್ಲಾಸ್ಟಿಕ್ ಮಾನವನ ಬಹುದೊಡ್ಡ ಅನ್ವೇಷಣೆ ಆದರೆ ಅದರ ಸರಿಯಾದ ಬಳಕೆ ಹಾಗೂ ಮರುಬಳಕೆಯಿಂದ ಪರಿಸರವನ್ನು ರಕ್ಷಿಸಬಹುದು. ತ್ಯಾಜ್ಯ ವಸ್ತುಗಳ ಸರಿಯಾದ ನಿರ್ವಹಣೆ ನೀರಿನ ಸರಿಯಾದ ನಿರ್ವಹಣೆಯಿಂದ ಪರಿಸರ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕರು ಕೇವಲ ಸರ್ಕಾರದ ಮೇಲೆ ಅವಲಂಬಿತರಾಗದೆ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

ವಲಯ ಅರಣ್ಯ ಅಧಿಕಾರಿ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಹರೀಶ್ ಕುಮಾರ್, ಅಪರ ಸಿವಿಲ್ ನ್ಯಾಯಾಧೀಶ ಹನುಮಂತರಾಯಪ್ಪ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎ.ಬಿ.ವೇಣು, ಕ್ಷೇತ್ರ ಶಿಕ್ಷಣಾಧಿಕಾರಿ, ಮಹೇಶ್, ಪುರಸಭೆಯ ಮುಖ್ಯಾಧಿಕಾರಿ ರಾಜಣ್ಣ ಹಾಗೂ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ಅಧ್ಯಕ್ಷ ವಿಶ್ವನಾಥ ಹರಳಹಳ್ಳಿ ಭಾಗವಹಿಸಿದ್ದರು.