ಸಾರಾಂಶ
ಸಂಡೂರು ಸೇರಿದಂತೆ ಎಲ್ಲೆಡೆ ಅರಣ್ಯದ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಭೂಮಿಯಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ನಿರಂತರವಾಗಿ ಹೊರತೆಗೆಯುವುದರಿಂದ ಮತ್ತು ಅರಣ್ಯ ನಾಶದಿಂದ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ
ಸಂಡೂರು: ತಾಲೂಕಿನ ಗೊಲ್ಲಲಿಂಗಮ್ಮನಹಳ್ಳಿ ಹಾಗೂ ಯರೇನಹಳ್ಳಿ ಗ್ರಾಪಂಆವರಣ ಹಾಗೂ ಸ್ವಾಮಿಹಳ್ಳಿ ಗ್ರಾಮದ ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಶುಕ್ರವಾರ ರೀಚ್ ಸಂಸ್ಥೆ, ಗೊಲ್ಲಲಿಂಗಮ್ಮನಹಳ್ಳಿ ಹಾಗೂ ಯರೇನಹಳ್ಳಿ ಗ್ರಾಪಂ ಸಂಯುಕ್ತಾಶ್ರಯದಲ್ಲಿ ವಿಶ್ವ ಭೂಮಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು.
ರೀಚ್ ಸಂಸ್ಥೆಯ ತಾಲೂಕು ಸಂಯೋಜಕ ಡಾ. ಎಚ್. ಎರ‍್ರಿಸ್ವಾಮಿ ಮಾತನಾಡಿ, ಸಂಡೂರು ಸೇರಿದಂತೆ ಎಲ್ಲೆಡೆ ಅರಣ್ಯದ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಭೂಮಿಯಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ನಿರಂತರವಾಗಿ ಹೊರತೆಗೆಯುವುದರಿಂದ ಮತ್ತು ಅರಣ್ಯ ನಾಶದಿಂದ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಪರಿಸರ ಸಂರಕ್ಷಣೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಪ್ರತಿಯೊಂದನ್ನು ಹಸಿರು ಗ್ರಾಮ ಪಂಚಾಯಿತಿಯಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.ಗೊಲ್ಲಲಿಂಗಮ್ಮನಹಳ್ಳಿ ಪಿಡಿಒ ಪಾಪಣ್ಣ ಮಾತನಾಡಿ, ಎಲ್ಲ ದೇಶಗಳು ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಪರಿಣಾಮ ಎದುರಿಸುತ್ತಿವೆ. ಅರಣ್ಯ ನಾಶದಿಂದ ಮಳೆಯ ಕೊರತೆ ಉಂಟಾಗಿ, ಭೂಮಿಯಲ್ಲಿ ಜೀವರಾಶಿಗಳಿಗೆ ನೀರಿನ ಅಭಾವ ತಲೆದೋರುತ್ತಿದೆ. ಹೆಚ್ಚೆಚ್ಚು ಗಿಡ-ಮರಗಳನ್ನು ಬೆಳೆಸುವುದು, ಅರಣ್ಯ ಹಾಗೂ ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದರು.
ತಾಲೂಕು ವಸತಿ ಯೋಜನೆಯ ನೋಡಲ್ ಅಧಿಕಾರಿ ಪ್ರಕಾಶ್ ಬಿ. ಐಹೊಳೆ, ಯರೇನಹಳ್ಳಿ ಗ್ರಾಪಂ ನರೇಗಾ ಬಿಎಫ್‌ಟಿ ಎರ‍್ರಿಸ್ವಾಮಿ ಎಸ್.ಜಿ., ಜಿ.ಎಲ್. ಹಳ್ಳಿ ಹಾಗೂ ಯರೇನಹಳ್ಳಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.