ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪರಿಸರ ರಕ್ಷಣೆಯು ಕೇವಲ ಇಂದಿನ ಮಹತ್ವಕಾಂಕ್ಷಿ ಅಪೇಕ್ಷೆಯಾಗಿರದೆ ಅದು ಸಮಾಜದ ಹಾಗೂ ಸಮುದಾಯದ ಅಸ್ತಿತ್ವಕ್ಕೆ ಮೂಲಭೂತ ಅವಶ್ಯಕತೆಯಾಗಿದೆ. ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರವು ಇತರ ಎಲ್ಲಾ ಸಮಾಜಮುಖಿ ಸಂಸ್ಥೆಗಳೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಸಮಾಜಮುಖಿ ಕಾರ್ಯಕ್ರಮವನ್ನು ಹೃದಯಪೂರ್ವಕವಾಗಿ ಶ್ಲಾಘಿಸಬೇಕಾಗಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭುಬಕ್ರು ನುಡಿದರು.

ತಾಲೂಕಿನ ಮುದ್ದೇನಹಳ್ಳಿಯ ಸಾಯಿ ಗ್ರಾಮದಲ್ಲಿ ಶನಿವಾರ ಸಸಿ ನೆಡುವ ಮೂಲಕ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿ ವಿವಿಧ ಸಂಸ್ಥೆಗಳು, ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಈ ಮಹತ್ವಪೂರ್ಣ, ಪವಿತ್ರ ಕಾರ್ಯಕ್ರಮವು ಸಮಾಜಕ್ಕೆ ಬಹಳ ಅತ್ಯಂತ ಪ್ರಯೋಜನಕಾರಿಯೆಂದು ಅಭಿಪ್ರಾಯಪಟ್ಟರು.

ವಾತಾವರಣದಲ್ಲಿನ ಬದಲಾವಣೆ, ನೈಸರ್ಗಿಕ ಸಂಪತ್ತಿನ ಇಳಿಕೆ ಹಾಗೂ ದಿನೇ ದಿನೇ ಹೆಚ್ಚುತ್ತಿರುವ ಜಲಕ್ಷಾಮಗಳು ಮುಂದಿನ ಪೀಳಿಗೆಗೆ ಒಂದು ಸವಾಲಾಗಿ ಪರಿಣಮಿಸಿವೆ. ಈ ಎಲ್ಲಾ ಕೊರತೆಗಳನ್ನು ನೀಗಿಸುವಲ್ಲಿ ಸರ್ಕಾರದ ಕ್ರಮಗಳಷ್ಟೇ ಸಾಲದು. ಇದರಲ್ಲಿ ಜನತೆ ಸಹ ಕ್ರಿಯಾಶೀಲರಾಗಿ ಪಾಲ್ಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಭಾರತ ಹಾಗೂ ಇಡೀ ವಿಶ್ವವು ಹೆಚ್ಚುತ್ತಿರುವ ತಾಪಮಾನ, ಅಕಾಲಿಕ ಹಾಗೂ ಅನಿಯಮಿತ ಮಳೆ ಮತ್ತು ಅಂತರ್ಜಲ ಪ್ರಮಾಣದ ಇಳಿಕೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದನ್ನು ಸುಧಾರಿಸದಿದ್ದಲ್ಲಿ ಮುಂದಿನ ಪೀಳಿಗೆಗೆ ಇದು ಬೃಹತ್ ಸಮಸ್ಯೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.


ಮಹತ್ವಾಕಾಂಕ್ಷೆ ಕ್ರಮ:

ಪರಿಸರ ಸಂರಕ್ಷಣೆಯು ಕೇವಲ ಪರಿಸರದ ಸಮತೋಲನವನ್ನು ಕಾಪಾಡುವಷ್ಟೇ ಅಲ್ಲದೆ ಅದು ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯ ಪ್ರತೀಕವಾಗಿದೆ. ಐದು ಕೋಟಿಗಳಷ್ಟು ಸಸಿಗಳನ್ನು ನೆಡುವ ಕಾರ್ಯಕ್ರಮವು ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮವಷ್ಟೇ ಅಲ್ಲದೆ ಅತ್ಯಂತ ಸೂಕ್ಷ್ಮಾವಲೋಕನ ಮತ್ತು ಮುಂದಾಲೋಚನೆಯ ಕ್ರಮವಾಗಿದೆ. ಪರಿಸರ ಸಮತೋಲನವು ಕೃಷಿ ಚಟುವಟಿಕೆಗಳು ಹಾಗೂ ಆರ್ಥಿಕ ಸ್ಥಿರತೆಯನ್ನು ಖಾತ್ರಿ ಪಡಿಸುತ್ತದೆ. ಈ ಸುಸಂದರ್ಭದಲ್ಲಿ ನೆಡುತ್ತಿರುವ ಪ್ರತಿಯೊಂದು ಸಸಿಯೂ ಮುಂದಿನ ಪೀಳಿಗೆಗೆ ಒಂದು ಆಸ್ತಿಯಾಗಿ ಪರಿಣಮಿಸುತ್ತದೆ ಎಂದು ಅವರು ಹೇಳಿದರು.

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆ, ಹಸಿರು ಅಭಿವೃದ್ಧಿ ಮತ್ತು ಆರೋಗ್ಯಕರ ಜೀವನಶೈಲಿಗೆ ಸಸಿ ನೆಡುವಿಕೆ ಹಾಗೂ ಸಾವಯವ ಕೃಷಿಯ ಮಹತ್ವ ದಿನದಿಂದ ದಿನಕ್ಕೆ ಅನಿವಾರ್ಯವಾಗುತ್ತಿದೆ. ಅರಣ್ಯ ನಾಶ, ಹವಾಮಾನ ಬದಲಾವಣೆ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸಲು ಹೆಚ್ಚಿನ ಪ್ರಮಾಣದಲ್ಲಿ ಸಸಿ ನೆಡುವುದು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನು ಶಿವರಾಮನ್, ಪ್ರಧಂಧಕ ಎಂ. ಚಂದ್ರಶೇಖರ ರೆಡ್ಡಿ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾದೀಶ ಟಿ.ಪಿ. ರಾಮಲಿಂಗೇಗೌಡ, ಪ್ರಶಾಂತಿ ಬಾಲಮಂದಿರ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರಶೆಟ್ಟಿ, ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ದರೆ ಪ್ರತಿಷ್ಠಾನದ ನಿರ್ದೇಶಕ ಡಿ.ಎಂ. ಪೂರ್ಣೇಶ್, ವಂದೇಭಾರತಂ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ಎಚ್. ಲೋಕೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಷ್, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಎಎಸ್ ಪಿ ಜಗನ್ನಾಥರೈ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆರ್. ಆಂಜನೇಯರೆಡ್ಡಿ, ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ.ಬಿ.ರೆಡ್ಡಿ, ಜಿಲ್ಲೆಯ ವಕೀಲರು, ವಿದ್ಯಾರ್ಥಿಗಳು ಮತ್ತಿತರರು ಇದ್ದರು. ಸಿಕೆಬಿ-1 ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸಾಯಿ ಗ್ರಾಮದಲ್ಲಿ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರು ಚಾಲನೆ ನೀಡಿದರು. ನ್ಯಾ. ಹಂಚಾಟೆ ಸಂಜೀವಕುಮಾರ್ ಮತ್ತಿತರರು ಇದ್ದರು.