ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪ್ರವೀಣ ಕುಮಾರ

| Published : Jun 06 2024, 12:31 AM IST

ಸಾರಾಂಶ

ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಅಮೃತ ಸರೋವರ ಕೆರೆ ದಡದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ಪ್ರಕೃತಿ ನಾಶಕ್ಕೆ ಕಡಿವಾಣ ಹಾಕಬೇಕಲ್ಲದೆ ನಮ್ಮ ಸುತ್ತಮುತ್ತ ಹೆಚ್ಚು ಹೆಚ್ಚು ಗಿಡ ಬೆಳೆಸಿ, ಉಳಿಸುವ ಜತೆಗೆ ಪ್ರಕೃತಿ ಮಾತೆ ಒಡಲು ಹಸಿರಾಗಿರುವಂತೆ ನೋಡಿಕೊಳ್ಳುವುದು ಪ್ರತಿ ನಾಗರಿಕರ ಜವಾಬ್ದಾರಿ ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ. ಪ್ರವೀಣ ಕುಮಾರ ಹೇಳಿದರು.

ಜಿಲ್ಲಾ ಪಂಚಾಯ್ತಿ ಯಾದಗಿರಿ, ತಾಲೂಕು ಪಂಚಾಯ್ತಿ ಶಹಾಪುರ ಹಾಗೂ ಗ್ರಾಮ ಪಂಚಾಯ್ತಿ ರಸ್ತಾಪೂರ ಸಹಯೋಗದಲ್ಲಿ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಅಮೃತ ಸರೋವರ ಕೆರೆ ದಡದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

1972ರಲ್ಲಿ ಜೂನ್ 5ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಮಾನವ ಪರಿಸರ ಸಂಬಂಧದ ಕುರಿತು ವಿಶ್ವಸಂಸ್ಥೆಯು ಸಮ್ಮೇಳನವೊಂದನ್ನು ನಡೆಸಿತ್ತು. ಪರಿಸರವನ್ನು ಉಳಿಸಿ, ಬೆಳೆಸುವ ಉದ್ದೇಶ ಹಾಗೂ ಪ್ರಕೃತಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 1973ರಿಂದ ಪ್ರಪಂಚದಾದ್ಯಂತ ಪ್ರತಿವರ್ಷ ಜೂನ್ 5ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಇತ್ತೀಚೆಗೆ ಅತಿ ಮಾಲಿನ್ಯದಿಂದ ಪರಿಸರ ಸಂಪೂರ್ಣ ನಾಶವಾಗಿದೆ. ಪರಿಸರ ನಾಶದ ಪರಿಣಾಮ ನಾವು ಈಗಾಗಲೇ ಅನುಭವಿಸುತ್ತಿದ್ದೇವೆ. ಮಳೆ ಇಲ್ಲದೆ ಭೂಮಿ, ಮನುಷ್ಯ ಕಂಗಾಲಾಗಿದ್ದಾನೆ. ಸೂರ್ಯನ ತಾಪಕ್ಕೆ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಪರಿಸರ ನಾಶ ಪ್ರಾಣಿ, ಪಕ್ಷಿ ಸೇರಿ ಮನುಕುಲಕ್ಕೆ ಶಾಪವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮನುಷ್ಯ ಪರಿಸರದ ಬಗ್ಗೆ ಜಾಗೃತಿ ವಹಿಸಿ ಪರಿಸರ ಕಾಳಜಿ ಮಾಡುವುದು ಬಹಳ ಅವಶ್ಯ ಎಂದು ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಮನೆಯಂಗಳದಲ್ಲಿ ಸಸಿ ನೆಟ್ಟು ಬೆಳೆಸಲು ಇಚ್ಚಿಸುವರಿಗೆ ಸಾಂಕೇತಿಕವಾಗಿ ಸಸಿಗಳನ್ನು ವಿತರಣೆ ಮಾಡಲಾಯಿತು.

ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಭೀಮಣ್ಣಗೌಡ ಬಿರಾದಾರ್, ರಸ್ತಾಪೂರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜ್ಞಾನಮಿತ್ರ, ಸ್ವಚ್ಛ ಭಾರತ ಮಿಷನ್ ಜಿಲ್ಲಾ ಐಇಸಿ ಸಂಯೋಜಕ ಶಿವುಕುಮಾರ, ಗ್ರಾಮ ಪಂಚಾಯ್ತಿ ಸದಸ್ಯರಾದ ಭಾಗಪ್ಪ, ದೇವಕ್ಕೆಮ್ಮ, ವಿಭೂತಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಿಂಗಣ್ಣ, ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಈರಣ್ಣ, ಗ್ರಾಮ ಪಂಚಾಯ್ತಿ ಸಿಬ್ಬಂದಿ ಶರಣಪ್ಪ, ಕರ ವಸೂಲಿಗಾರ ಮಲ್ಲಪ್ಪ, ಆಂಜನೇಯ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.