ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಯೋಜನಾ ನಿರ್ದೇಶಕಿ ಮಮತಾ

| Published : Jun 20 2024, 01:10 AM IST

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಯೋಜನಾ ನಿರ್ದೇಶಕಿ ಮಮತಾ
Share this Article
  • FB
  • TW
  • Linkdin
  • Email

ಸಾರಾಂಶ

ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಆದರೆ ಕೆಲವು ಪ್ರದೇಶಗಳಲ್ಲಿ ನಾವು ಭೂಮಿಯನ್ನು ಸುಂದರವಾಗಿ ನೋಡಲಾಗುತ್ತಿಲ್ಲ, ಇದಕ್ಕೆ ನಮ್ಮ ಪರಿಸರ ಜಾಗೃತಿ ಇಲ್ಲದಿರುವುದು ಕಾರಣವಾಗಿದೆ. ಅರಣ್ಯ ನಾಶದಿಂದಾಗಿ ಕಾಡುಪ್ರಾಣಿಗಳು ಗ್ರಾಮಗಳತ್ತ ಬರುತ್ತಿವೆ,

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪರಿಸರ ನಿರ್ಲಕ್ಷ್ಯದಿಂದಾಗಿ ಮನುಕುಲಕ್ಕೆ ಆಪತ್ತನ್ನು ನಾವೇ ತಂದುಕೊಳ್ಳುತ್ತಿದ್ದೇವೆ. ಮುಂದಿನ ಪೀಳಿಗೆಯ ಭವಿಷ್ಯ ದೃಷ್ಟಿಯಿಂದಲಾದರೂ ಮರ ಬೆಳೆಸುವತ್ತ ಗಮನ ನೀಡಬೇಕು ಎಂದು ಧರ್ಮಸ್ಥಳ ಯೋಜನಾ ಜಿಲ್ಲಾ ನಿರ್ದೇಶಕಿ ಮಮತಾ ರಾವ್ ಅಭಿಪ್ರಾಯಪಟ್ಟರು

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ರಾಮಣ್ಣ ಶಾಲೆಯಲ್ಲಿ ಪೌಷ್ಟಿಕಾಂಶವುಳ್ಳ ಫಲ ಬಿಡುವ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ಪರಿಸರ ದಿನವು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗವಾರದು. ನಿರಂತರವಾಗಿ ಸಸಿ ನೆಡುವ ಕಾರ್ಯಕ್ರಮಗಳು ನಡೆಯುತ್ತಲೇ ಇರಬೇಕು, ದೊಡ್ಡ ನಗರಗಳೆಲ್ಲ ಕಾಂಕ್ರೀಟ್ ಮಯವಾಗಿವೆ. ಇದರಿಂದಾಗಿ ಮಳೆ ಎಷ್ಟು ಬಂದರೂ ಸಹ ಅಂತರ್ಜಲ ವೃದ್ಧಿಯಾಗುವುದಿಲ್ಲ, ನೀರಿನ ಅಭಾವ ತಲೆದೋರುತ್ತಿದೆ. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸ್ವಚ್ಛತೆ ನಿರ್ವಹಿಸಿದಂತೆ ಎಲ್ಲ ಕಡೆಯೂ ಅದನ್ನು ಪಾಲಿಸಬೇಕೆಂದು ಅವರು ಕರೆ ನೀಡಿದರು.

ಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಆದರೆ ಕೆಲವು ಪ್ರದೇಶಗಳಲ್ಲಿ ನಾವು ಭೂಮಿಯನ್ನು ಸುಂದರವಾಗಿ ನೋಡಲಾಗುತ್ತಿಲ್ಲ, ಇದಕ್ಕೆ ನಮ್ಮ ಪರಿಸರ ಜಾಗೃತಿ ಇಲ್ಲದಿರುವುದು ಕಾರಣವಾಗಿದೆ. ಅರಣ್ಯ ನಾಶದಿಂದಾಗಿ ಕಾಡುಪ್ರಾಣಿಗಳು ಗ್ರಾಮಗಳತ್ತ ಬರುತ್ತಿವೆ, ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿ ಭೂಮಿಯಲ್ಲಿ ಅಂತರ್ಜಲ ಹೆಚ್ಚು ಸಮಸ್ಯೆಯಾಗುತ್ತಿದೆ. ಕಸ ವಿಲೇವಾರಿ ಮಾಡುವಾಗ ಪ್ಲಾಸ್ಟಿಕ್ ಅನ್ನು ಪ್ರತ್ಯೇಕವಾಗಿ ವಿಂಗಡಿಸಿದಲ್ಲಿ ಅದನ್ನು ನಗರಸಭೆ ರಿಸೈಕ್ಲಿಂಗ್ ಮಾಡುತ್ತಾರೆ. ಹುಟ್ಟುಹಬ್ಬದ ದಿನ ದೇವಾಲಯಕ್ಕೆ ಹೋಗಿ ದೇವರಿಗೆ ನಮಸ್ಕರಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರೆ ಸಾಲದು, ಹುಟ್ಟುಹಬ್ಬ, ವಿವಾಹ ಮೊದಲಾದ ಶುಭ ಸಮಾರಂಭಗಳು ನಡೆದಾಗ ಅದರ ನೆನಪಿಗಾಗಿ ಒಂದೊಂದು ಗಿಡವನ್ನು ನೆಡುವ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೆರೆ, ದೇವಾಲಯಗಳ ಅಭಿವೃದ್ಧಿ, ಸ್ವಚ್ಛತೆ ಹಾಗೂ ಶಿಕ್ಷಣಕ್ಕೂ ಹೆಚ್ಚಿನ ಒತ್ತನ್ನು ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಪರಿಸರದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು ಎಂಬಿತ್ಯಾದಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ನೀವು ಏನಾಗಬೇಕೆಂದು ಬಯಸುತ್ತೀರಿ ಎಂಬಂತೆ ಮೊದಲಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಆರ್ಪಿ ವಿಷ್ಣುವರ್ಧನ್, ಕಾಡನ್ನು ನಾವು ಹಾಳು ಮಾಡುತ್ತಿದ್ದೇವೆ, ಇದರಿಂದಾಗಿ ಕಾಡು ಪ್ರಾಣಿಗಳು ಊರಿನತ್ತ ಬರುತ್ತಿವೆ. ನಾವು ಕಾಡುಗಳಲ್ಲಿ ಹೋದರೆ ಸುಂದರವಾದ ವಾತಾವರಣ ಇರುತ್ತದೆ, ಪ್ರಾಣಿಗಳು ಉತ್ತಮ ಪರಿಸರದಲ್ಲಿ ಬಾಳುತ್ತಿವೆ, ನಮ್ಮ ಪರಿಸರವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳು ನೈರ್ಮಲ್ಯದತ್ತ ಆಸಕ್ತಿ ವಹಿಸಿ ಎಂದು ಕರೆ ನೀಡಿದರು.

ಶಾಲಾ ಮುಖ್ಯ ಶಿಕ್ಷಕಿ ಕರಿಯಮ್ಮ, ನಮ್ಮ ಶಾಲೆಯ ಮೇಲೆ ಅಭಿಮಾನವಿಟ್ಟು, ಧರ್ಮಸ್ಥಳ ಸಂಸ್ಥೆಯವರು ಕಾರ್ಯಕ್ರಮವನ್ನು ರೂಪಿಸಿ ಮಕ್ಕಳಿಗೆ ಪರಿಸರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ. ಸಂಸ್ಥೆ ವತಿಯಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಕಾಣುತ್ತಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಾವು ಹೋದ ಸಂದರ್ಭದಲ್ಲಿ ಎರಡು ಮೂರು ಬಾರಿ ಶ್ರೀ ಗುರುಗಳನ್ನು ಭೇಟಿ ಮಾಡಿದ್ದೇನೆ. ನನಗೆ ಆತ್ಮಸ್ಥೈರ್ಯವನ್ನು ತುಂಬಿದ್ದರು. ಇಂದು ನಾನು ಈ ಸ್ಥಾನದಲ್ಲಿದ್ದೇನೆಂದರೆ ಅವರ ಆಶೀರ್ವಾದವೂ ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಅಕ್ಷತಾ ರೈ, ಕೃಷಿ ಅಧಿಕಾರಿ ಗುರುಮೂರ್ತಿ, ಮೇಲ್ವಿಚಾರಕರಾದ ಗಂಡಸಿ ಸೀತಾರಾಮ್, ವಾರಿಜಾ, ಹಿರಿಯ ಪತ್ರಕರ್ತ ಎಚ್. ಡಿ. ಸೀತಾರಾಮ್, ಶಿಕ್ಷಕರಾದ ಶಶಿಧರ್, ಪ್ರೀತಿ ಉಪಸ್ಥಿತರಿದ್ದರು. ಪ್ರಾಸ್ತಾವಿಕ ನುಡಿ ಹಾಗೂ ನಿರೂಪಣೆಯನ್ನು ವಾರಿಜಾ ನಿರ್ವಹಿಸಿದರು.