ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಪರಿಸರ ಸಂರಕ್ಷಣೆ ಪ್ರತಿ ನಾಗರಿಕರ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಪಟ್ಟಣದ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶೆ ಸ್ನೇಹ ಅಭಿಪ್ರಾಯಪಟ್ಟರು.ಪಟ್ಟಣದ ಕೋರ್ಟ್ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಲಯನ್ಸ್ ಕ್ಲಬ್, ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಕೃತಿಯಲ್ಲಿನ ಗಿಡಮರಗಳನ್ನು ಕಾಳಜಿ ವಹಿಸಿ ರಕ್ಷಿಸಿದರೆ ಮನುಷ್ಯ ಹಾಗೂ ಪ್ರಾಣಿ, ಪಕ್ಷಿ ಸಂಕುಲಕ್ಕೆ ಶುದ್ಧ, ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಪ್ರಾಕೃತಿಕ ಸಮತೋಲನ ಕಾಪಾಡಲು ಸಾಧ್ಯ. ಅದೇರೀತಿ ಜಡ್ಜ್‌ಮೆಂಟ್ ಮೂಲಕ ಬಗೆಹರಿದರೆ ಒಬ್ಬರಿಗೆ ಸೋಲು ಇನ್ನೊಬ್ಬರಿಗೆ ಗೆಲುವಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಲೋಕ ಅದಾಲತ್ ಇದ್ದು ಒಬ್ಬರಿಗೊಬ್ಬರು ಕೂತು ಲೋಕ ಅದಾಲತ್ ಮೂಲಕ ರಾಜಿ ಮಾಡಿಕೊಂಡರೆ ಇಬ್ಬರಿಗೂ ಗೆಲುವಾಗುತ್ತದೆ. ಆದ್ದರಿಂದ ರಾಜಿ ಮೂಲಕ ಬಗೆಹರಿಸಿಕೊಂಡು ನೆಮ್ಮದಿ ಜೀವನ ಕಾಣಬಹುದು ಎಂದರು.
ಲಯನ್ಸ್ ಕ್ಲಬ್ ತಾಲೂಕು ಅಧ್ಯಕ್ಷ ಹಾಗೂ ಹಿರಿಯ ವಕೀಲ ಬಿ. ಮಂಜೇಗೌಡ ಮಾತನಾಡಿ, ಪ್ರಕೃತಿ ನಾಶದಿಂದ ಜೀವ ಸಂಕುಲಕ್ಕೆ ಆಪತ್ತು ಎದುರಾಗಿದೆ. ಸಸಿ ನೆಡುವ ಕಾರ್ಯಕ್ರಮಗಳು ಕೇವಲ ಪರಿಸರ ದಿನಾಚರಣೆಗೆ ದಾಖಲೆಗಾಗಿ ಸೀಮಿತವಾಗದೆ ವರ್ಷವಿಡೀ ನಮ್ಮ ಪರಿಸರದಲ್ಲಿ ಸಸಿಗಳನ್ನು ನೆಟ್ಟು ಲಾಲನೆ ಪಾಲನೆ ಮಾಡಬೇಕು. ಗಿಡಮರಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಲಯನ್ಸ್ ಕ್ಲಬ್ ಸಮಾಜದಲ್ಲಿನ ಪ್ರತಿಯೊಬ್ಬರೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಲಯನ್ಸ್ ಕ್ಲಬ್ ವೇದಿಕೆಯಾಗಿದೆ. ಆರೋಗ್ಯ ಉಚಿತ ತಪಾಸಣೆ, ದಂತ ಚಿಕಿತ್ಸೆ ತಪಾಸಣಾ ಶಿಬಿರ, ನೇತ್ರ ಉಚಿತ ಶಸ್ತ್ರ ಚಿಕಿತ್ಸೆ, ಶಾಲಾ-ಕಾಲೇಜುಗಳಿಗೆ ಅಗತ್ಯ ಪರಿಕರಗಳನ್ನು ನೀಡುವುದು, ಅಂಗವಿಕಲರ ಶಾಲೆಗಳ ಅಭಿವೃದ್ಧಿಗೆ ಸಹಾಯ, ಬಡ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಸಂಸ್ಥೆಯು ಬೆಳಕಾಗುತ್ತಿದೆ ಎಂದು ಹೇಳಿದರು.ವಕೀಲರ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿ, ಪ್ರಕೃತಿಯಲ್ಲಿನ ಏರುಪೇರುಗಳಿಂದ ಭೂಮಿಯ ತಾಪಮಾನ ಹೆಚ್ಚಾಗಿದ್ದು ಅದರಿಂದ ಪ್ರಾಕೃತಿಕ ಅಸಮತೋಲನ ಏರ್ಪಟ್ಟಿದೆ ತಾಪಮಾನವನ್ನು ನಿಯಂತ್ರಿಸಿ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಮಹೇಶ್, ಶಿರಸ್ತೆದಾರ್ ನಾಗರಾಜ್, ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ,ಕರವೇ ತಾಲೂಕು ಅಧ್ಯಕ್ಷ ನಟರಾಜ್,ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಾಂತಕುಮಾರ್, ಲಯನ್ಸ್ ಕ್ಲಬ್ ನಿರ್ದೇಶಕರಾದ ವಿ.ವಿ.ಗಿರೀಶ್, ಎಚ್.ಜಿ.ಆನಂದ್, ರೇಣುಕಾಪ್ರಸಾದ್, ಪ್ರವೀಣ್ ಎಚ್.ಜಿ, ನಾಗರಾಜ ಹುಲ್ಲಳ್ಳಿ, ಗಿರೀಶ್, ನಾಗರಾಜು ಹೆದ್ದುರ್ಗ, ಸುದೀಶ್, ಭವ್ಯ ರಘು, ಕುಲದೀಪ್, ಚಿರಾಗ್, ಇತರರು ಉಪಸ್ಥಿತರಿದ್ದರು.