ಬೇಡ್ತಿ-ಅಘನಾಶಿನಿ ನದಿತಿರುವು, ಶರಾವತಿ ಭೂಗತ ಜಲವಿದ್ಯುತ್ ಯೋಜನೆಗೆ ವಿರೋಧಕನ್ನಡಪ್ರಭ ವಾರ್ತೆ ಶಿರಸಿ
ಚಾತುರ್ಮಾಸ್ಯ ಎಂದರೆ ಕೇವಲ ವ್ರತ, ಪೂಜೆ, ಜಪ-ತಪಗಳ ಕಾಲವಲ್ಲ; ಸೃಷ್ಟಿಯ ಸಂರಕ್ಷಣೆಯ ಸಂಕಲ್ಪವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪವಿತ್ರ ಅವಧಿಯೂ ಹೌದು. ಈ ಸಂದೇಶವನ್ನು ಸಮಾಜಕ್ಕೆ ಸಾರುತ್ತಿರುವ ಹಸಿರು ಮಠ ಎಂದೇ ಖ್ಯಾತಿ ಪಡೆದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವು, ಚಾತುರ್ಮಾಸ್ಯದ ಅಂಗವಾಗಿ ಪರಿಸರ ಸಂರಕ್ಷಣೆಯ ಬೃಹತ್ ಪತ್ರ ಚಳವಳಿಗೆ ಚಾಲನೆ ನೀಡಿದೆ.ಜಿಲ್ಲೆಯ ಬೇಡ್ತಿ ಹಾಗೂ ಅಘನಾಶಿನಿ ನದಿತಿರುವು ಯೋಜನೆ ಮತ್ತು ಶರಾವತಿ ಭೂಗತ ಜಲವಿದ್ಯುತ್ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಈ ಅಭಿಯಾನವು ಜು. 29ರಿಂದ ಸೆ.26ರವರೆಗೆ ನಡೆಯುವ ಚಾತುರ್ಮಾಸ್ಯದ ಅವಧಿಯಿಡೀ ನಡೆಯಲಿದ್ದು, ಮಠಕ್ಕೆ ಆಗಮಿಸುವ ಸಾವಿರಾರು ಶಿಷ್ಯ ಭಕ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ವೈಯಕ್ತಿಕವಾಗಿ ಮನವಿ ಪತ್ರಗಳನ್ನು ಅಂಚೆ ಮೂಲಕ ರವಾನಿಸಲಿದ್ದಾರೆ.
ಹಸಿರು ಸ್ವಾಮೀಜಿ ಎಂದೇ ಜನಮನದಲ್ಲಿ ಹೆಸರಾದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸಂಕಲ್ಪದಂತೆ, ಪ್ರಕೃತಿಯ ರಕ್ಷಣೆಯೇ ಪರಮ ಧರ್ಮ ಎಂಬ ಸಂದೇಶವನ್ನು ಸಮಾಜದೊಳಗೆ ಬಿತ್ತುವ ಉದ್ದೇಶದಿಂದ ಈ ಚಳವಳಿ ರೂಪುಗೊಂಡಿದೆ. ಆಧ್ಯಾತ್ಮಿಕ ಸಾಧನೆಯ ಜೊತೆಗೆ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು ಎಂಬ ಆಶಯದಲ್ಲಿ ಮಠವು ಭಕ್ತರನ್ನು ಜಾಗೃತಗೊಳಿಸುತ್ತಿದೆ.ಪಶ್ಚಿಮ ಘಟ್ಟ, ನದಿಗಳು, ಅರಣ್ಯ ಮತ್ತು ಜೀವವೈವಿಧ್ಯವನ್ನು ಉಳಿಸುವುದು ಇಂದಿನ ಪೀಳಿಗೆಯ ಹೊಣೆಗಾರಿಕೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಗೆ ಶಾಶ್ವತ ಹಾನಿ ಉಂಟುಮಾಡುವ ಯೋಜನೆಗಳನ್ನು ಮರುಪರಿಶೀಲಿಸಬೇಕು. ಪರಿಸರ ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ಸುರಕ್ಷಿತ ಬದುಕು ಸಾಧ್ಯ ಎಂಬ ಸಂದೇಶವನ್ನು ಜನ ಜನಿತಗೊಳಿಸುವ ಉದ್ದೇಶದಿಂದಲೇ ಚಾತುರ್ಮಾಸ್ಯದ ಈ ಪತ್ರ ಚಳುವಳಿಯನ್ನು ಜನಾಂದೋಲನವಾಗಿ ರೂಪಿಸಲಾಗಿದೆ.
ಕಳೆದ ತಿಂಗಳು ಶಿರಸಿ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ೨೫ ಸಾವಿರಕ್ಕೂ ಅಧಿಕ ಮನವಿ ಸಲ್ಲಿಸಲಾಗಿತ್ತು. ಪರಿಸರ ಕಾರ್ಯಕರ್ತ ವಿಶ್ವನಾಥ ಶೀಗೇಹಳ್ಳಿ ಶ್ರೀಗಳ ಸೂಚನೆಯಂತೆ ಅದರ ಸಂಚಾಲಕತ್ವ ವಹಿಸಿದ್ದರು. ಮುಂದುವರಿದ ಭಾಗವಾಗಿ ಈಗ ಚಾತುರ್ಮಾಸ್ಯದ ಅವಧಿಯಲ್ಲಿ ರಾಜ್ಯ ಕೇಂದ್ರ ಸರ್ಕಾರಗಳಿಗೆ ಸುಮಾರು 10 ಸಾವಿರಕ್ಕೂ ಅಧಿಕ ಪತ್ರ ಕಳುಹಿಸುವ ಗುರಿ ಹೊಂದಲಾಗಿದೆ. ಮಹಿಳೆಯರು, ಮಕ್ಕಳು, ಯುವಕರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಭಕ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಠದಲ್ಲಿ ಸಿದ್ಧಪಡಿಸಿರುವ ಮನವಿ ಪತ್ರದಲ್ಲಿ ಬೆಡ್ತಿ ಹಾಗೂ ಅಘನಾಶಿನಿ ನದಿತಿರುವು ಯೋಜನೆಗಳು ಮತ್ತು ಶರಾವತಿ ಭೂಗತ ಜಲವಿದ್ಯುತ್ ಯೋಜನೆಯಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆ, ದಟ್ಟ ಅರಣ್ಯ, ಜೀವವೈವಿಧ್ಯ ಹಾಗೂ ಕೃಷಿಭೂಮಿಗೆ ಗಂಭೀರ ಹಾನಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ನದಿಗಳ ಸಹಜ ಹರಿವು ಕುಂಠಿತಗೊಂಡರೆ ಕೆಳಭಾಗದ ಜನರಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಕೊರತೆ ಎದುರಾಗಬಹುದು. ಮೀನು ಸೇರಿದಂತೆ ಜಲಚರಗಳ ಸಂತಾನೋತ್ಪತ್ತಿಗೆ ಧಕ್ಕೆಯಾಗುವುದರ ಜೊತೆಗೆ ರೈತರು, ಮೀನುಗಾರರು ಹಾಗೂ ಅರಣ್ಯವನ್ನೇ ಅವಲಂಬಿಸಿರುವ ಸಮುದಾಯಗಳ ಜೀವನೋಪಾಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಬದಲಾಗಿ ಮಳೆನೀರು ಸಂಗ್ರಹಣೆ, ಕೆರೆಗಳ ಪುನರುಜ್ಜೀವನ ಹಾಗೂ ಸ್ಥಳೀಯ ಜಲಮೂಲಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.ಇದು ಕೇವಲ ಪತ್ರ ಬರೆಯುವ ಕಾರ್ಯಕ್ರಮವಲ್ಲ, ಪ್ರಕೃತಿಯ ಪರವಾಗಿ ಜನರ ಧ್ವನಿಯನ್ನು ಸರ್ಕಾರದ ಕಿವಿಗೆ ತಲುಪಿಸುವ ನಿರಂತರ ಜನಾಂದೋಲನ. ನದಿ, ಅರಣ್ಯ ಮತ್ತು ಪಶ್ಚಿಮ ಘಟ್ಟವನ್ನು ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಎನ್ನುತ್ತಾರೆ ಬೇಡ್ತಿ–ಅಘನಾಶಿನಿ ಕಣಿವೆ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರನದಿ ತಿರುವು ಯೋಜನೆ ಕುರಿತು ದಿನದಿಂದ ದಿನಕ್ಕೆ ಹೊಸ ಬೆಳವಣಿಗೆ ನಡೆಯುತ್ತಿವೆ. ನಮ್ಮ ವಿರೋಧವನ್ನು ಸರ್ಕಾರಕ್ಕೆ ನಿರಂತರವಾಗಿ ತಿಳಿಸುವ ಪ್ರಯತ್ನ ಇದು. ಇಲ್ಲಿನ ಮಾದರಿಯ ಪತ್ರವನ್ನಾಗಲಿ ಅಥವಾ ತಮ್ಮದೇ ಮಾತುಗಳಲ್ಲಿ ಮನವಿಯನ್ನಾಗಲಿ ಬರೆದು ಪ್ರತಿಯೊಬ್ಬರೂ ಅಭಿಯಾನದಲ್ಲಿ ಭಾಗವಹಿಸಬಹುದು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ತಿಳಿಸಿದ್ದಾರೆ.