ಸಾರಾಂಶ
ಸಮಾಜದಲ್ಲಿ ಪರಿಸರವೇ ಜಾದೂವಿನಂತಿದೆ. ಇಂಥ ಪರಿಸರ ರಕ್ಷಿಸುವುದು ಆದ್ಯ ಕರ್ತವ್ಯ ಎಂದು ಕುದ್ರೋಳಿ ಗಣೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಾನಸಿಕ ಆರೋಗ್ಯ, ನೀರಿನ ಮಹತ್ವ, ಹಸಿರು ಸಂರಕ್ಷಣೆ ಸಂಬಂಧಿತ ರೋಟರಿ ಸಂಸ್ಥೆಗಳ ವತಿಯಿಂದ ನಗರದಲ್ಲಿ ಜಾದೂ ಮೂಲಕ ಜಾಗೃತಿ ಮೂಡಿಸುವ ವಿಭಿನ್ನ ಕಾರ್ಯಕ್ರಮ ಆಯೋಜಿತವಾಗಿತ್ತು.ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಮಂಗಳೂರು ರೋಟರಿ ಕ್ಲಬ್ ಗಳು, ಮಡಿಕೇರಿಯ ಮೂರು ರೋಟರಿ ಕ್ಲಬ್ ಗಳ ಸಂಯುಕ್ತಾಶ್ರಯದಲ್ಲಿ ಮಾನಸಿಕ ಆರೋಗ್ಯ, ನೀರನ್ನು ಉಳಿಸಿ ಮತ್ತು, ಹಸಿರು ಸಂರಕ್ಷಣೆ ಸಂಬಂಧಿತ ರೋಟರಿ ಸಂಸ್ಥೆಯಿಂದ ವಾಹನ ಜಾಥಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕುದ್ರೋಳಿ ಗಣೇಶ್ ಮ್ಯಾಜಿಕ್ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು.
ನಮ್ಮ ಸಮಾಜದಲ್ಲಿ ಪರಿಸರವೇ ಜಾದೂವಿನಂತಿದೆ. ಇಂಥ ಪರಿಸರವನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕಾಗಿದೆ ಎಂದು ಕುದ್ರೋಳಿ ಗಣೇಶ್ ಕರೆ ನೀಡಿದರು.ರೋಟರಿ ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷ ಕಿರಣ್ ಪ್ರಸಾದ್ ರೈ ಮಾತನಾಡಿ, ಮಂಗಳೂರಿನಿಂದ ಪ್ರಾರಂಭವಾಗಿರುವ ಈ ವಾಹನ ಜಾಥಾವು 52 ರೋಟರಿ ಸಂಸ್ಥೆಗಳಿಗೆ ತೆರಳಿ ಮಾನಸಿಕ ಆರೋಗ್ಯ, ನೀರನ್ನು ಉಳಿಸುವುದು ಮತ್ತು ಹಸಿರು ಸಂರಕ್ಷಣೆಯ ಮಹತ್ವವನ್ನು ಜಾದೂ ಮೂಲಕ ಸಾರುತ್ತಾ ಕೊಳ್ಳೇಗಾಲದಲ್ಲಿ ಸಮಾಪನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ರೋಟರಿ ವಲಯ 6 ರ ಸಹಾಯಕ ಗವರ್ನರ್ ದೇವಣಿರ ತಿಲಕ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ರೋಟರಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್, ಕಾರ್ಯದರ್ಶಿ ಕಿಗ್ಗಾಲು ಹರೀಶ್, ರೋಟರಿ ಜಿಲ್ಲಾ ನಿರ್ದೇಶಕ ಸತೀಶ್ ಬೊಳಾರ್ ಸೇರಿದಂತೆ ರೋಟರಿ ಪ್ರಮುಖರು, ಸದಸ್ಯರು ಪಾಲ್ಗೊಂಡಿದ್ದರು. ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಎಚ್.ಟಿ. ನಿರೂಪಿಸಿದರು.