ಪರಿಸರ ಸಂರಕ್ಷಣೆಯೇ ಆದ್ಯ ಕರ್ತವ್ಯವಾಗಲಿ: ಲಕ್ಷ್ಮೀದೇವಿ

| Published : Jun 06 2024, 12:30 AM IST

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಭವಿಷ್ಯದ ದೃಷ್ಟಿಯಿಂದ ನಾವೆಲ್ಲರೂ ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಬೇಕಾಗಿದ್ದು, ಇದು ಎಲ್ಲರ ಆದ್ಯ ಕರ್ತವ್ಯವಾಗಿದೆ.

ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ

ಕನ್ನಡಪ್ರಭ ವಾರ್ತೆ ಕಾರಟಗಿ

ಪ್ರಸ್ತುತ ದಿನಗಳಲ್ಲಿ ಭವಿಷ್ಯದ ದೃಷ್ಟಿಯಿಂದ ನಾವೆಲ್ಲರೂ ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಬೇಕಾಗಿದ್ದು, ಇದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಪಂ ಹಾಗೂ ಸಾಮಾಜಿಕ ಅರಣ್ಯ ವಲಯ ಗಂಗಾವತಿ ಇವುಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆ. ಈ ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಇತ್ಯಾದಿಗಳು ಎಂದೆಂದಿಗೂ ಉಳಿಯಬೇಕು. ನಾವೆಲ್ಲರೂ ಈ ಪರಿಸರದ ಮೇಲೆ ಅವಲಂಬಿತರಾಗಿದ್ದೇವೆ. ಅದಕ್ಕಾಗಿ ಪರಿಸರವನ್ನು ಸಂರಕ್ಷಿಸಲು ಮುಂದಾಗಬೇಕು ಎಂದರು.

ನಂತರ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಮಾತನಾಡಿ, ನಾವೆಲ್ಲರೂ ಪರಿಸರ ಸ್ನೇಹಿಯಾಗಿ ಬಾಳೋಣ ಎಂದರು. ನಂತರ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನಡೆಲಾಯಿತು.ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕಿ ವೈ. ವನಜಾ, ಉಪ ವಲಯ ಅರಣ್ಯ ಅಧಿಕಾರಿ ಕವಿತಾ ನಾಯಕ, ತಾಲೂಕಿನ ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗಸ್ತು ಅರಣ್ಯ ಪಾಲಕರಾದ ಶಿವಶರಣ ಕೊಳಿ, ಮಹಾಂತೇಶ ಕುಂಬಾರ ಸೇರಿ ವಿವಿಧ ಯೋಜನೆಗಳ ವಿಷಯ ನಿರ್ವಾಹಕರು, ನರೇಗಾ, ತಾಪಂ ಸಿಬ್ಬಂದಿ ಇದ್ದರು.

ಸಸಿ ನೆಡುವ ಯೋಜನೆ:ಪುರಸಭೆಯಿಂದ ಇಲ್ಲಿನ ವಸುಂಧರಾ ನಗರದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ಪಟ್ಟಣದ ೨೧ ವಾರ್ಡ್‌ಗಳಲ್ಲಿ ವಿವಿಧ ನಮೂನೆ ೨೫೦೦ ಸಸಿಗಳನ್ನು ನಾಟಿ ಮಾಡಲು ಪುರಸಭೆ ಯೋಜನೆ ಹಮ್ಮಿಕೊಂಡಿದೆ. ಬರುವ ಜೂನ್ ೧೦ರಂದು ಪಟ್ಟಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಮುಖ್ಯರಸ್ತೆ ಬದಿಯಲ್ಲಿ, ನವಲಿ ರಸ್ತೆಯಲ್ಲಿ ಡಿವೈಡರ್ ಮಧ್ಯ ಸೇರಿದಂತೆ ವಾರ್ಡಿಗೆ ೧೦೦ ಸಸಿ ಹಂಚಿಕೆ ಮಾಡಿ ನೆಡುವುದಾಗಿ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಹೇಳಿದರು.

ಈ ವೇಳೆ ಪುರಸಭೆಯ ರಾಘವೇಂದ್ರ, ನಾಗರಾಜ ಚೆಳ್ಳೂರು, ಆರೋಗ್ಯಾಧಿಕಾರಿ ಅಕ್ಷತಾ ಕಮ್ಮಾರ, ಚೆನ್ನಬಸವಸ್ವಾಮಿ, ಪರಿಸರ ಅಧಿಕಾರಿ ಶರಣಪ್ಪ ಸೇರಿದಂತೆ ಇನ್ನಿತರರು ಇದ್ದರು.