ಪಾವಗಡದಲ್ಲಿ ಗ್ರಾಮದ ಖಾತೆ ಮಾಡಿಕೊಡದೆ ಜಾಗ ಖಾಲಿ ಮಾಡಿದ ಇಒ

| Published : Nov 15 2024, 12:32 AM IST

ಸಾರಾಂಶ

ರಾಜಕೀಯ ಕುಮ್ಮಕ್ಕಿನಿಂದ ನಿವೇಶನದ ಖಾತೆ ಮಾಡಿಕೊಡುವಲ್ಲಿ ಸತಾಯಿಸುತ್ತಿದ್ದಾರೆಂದು ಆರೋಪಿಸಿ ಪಾವಗಡ ತಾಲೂಕಿನ ಪೆನ್ನೋಬನಹಳ್ಳಿ ನರಸಿಂಹಯ್ಯ ಹಾಗೂ ಗ್ರಾಮದ ಮುಖಂಡರು ತಾಪಂಗೆ ಮುತ್ತಿಗೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ರಾಜಕೀಯ ಕುಮ್ಮಕ್ಕಿನಿಂದ ನಿವೇಶನದ ಖಾತೆ ಮಾಡಿಕೊಡುವಲ್ಲಿ ಸತಾಯಿಸುತ್ತಿದ್ದಾರೆಂದು ಆರೋಪಿಸಿ ತಾಲೂಕಿನ ಪೆನ್ನೋಬನಹಳ್ಳಿ ನರಸಿಂಹಯ್ಯ ಹಾಗೂ ಗ್ರಾಮದ ಮುಖಂಡರು ತಾಪಂಗೆ ಮುತ್ತಿಗೆ ಪ್ರತಿಭಟನೆ ನಡೆಸಿದರು. ಈ ವೇಳೆ ತಾಪಂ ಇಒ ಜಾನಕಿರಾಮ್‌ ಸಬೂಬು ಹೇಳಿ ಕೂಡಲೇ ಕಚೇರಿಯಿಂದ ಜಾಗ ಖಾಲಿ ಮಾಡಿ ಪರಾರಿಯಾದ ಪ್ರಸಂಗ ತಾಪಂನಲ್ಲಿ ನಡೆಯಿತು.

ತಾಲೂಕಿನ ಸಾಸಲಕುಂಟೆ ಗ್ರಾಪಂ ವ್ಯಾಪ್ತಿಯ ಪೊನ್ನೋಬನಹಳ್ಳಿ ವಾಸಿ ನಾಯಕ ಸಮಾಜದ ನರಸಿಂಹಯ್ಯ ಎನ್ನುವರು ತಮ್ಮ ನಿವೇಶನದ ಖಾತೆ ನೋಂದಣಿ ಮಾಡಿಸುವ ಸಲುವಾಗಿ ಅಗತ್ಯ ದಾಖಲೆಯೊಂದಿಗೆ ಗ್ರಾಪಂ ಪಿಡಿಒಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಪರಿಶೀಲಿಸಿದ ಗ್ರಾಪಂ ಪಿಡಿಒ ಕಳೆದ 6ತಿಂಗಳ ಹಿಂದೆ ನಿವೇಶನ ಖಾತೆ ನಿರ್ವಹಣೆಗೆ ಅನುಮತಿ ಕೋರಿ ತಾಪಂ ಇಒಗೆ ಅಗತ್ಯ ದಾಖಲೆ ಸಲ್ಲಿಸಿದ್ದರು. ಪರಿಶೀಲಿಸಿ ಅನುಮತಿ ನೀಡುವಲ್ಲಿ ಕಳೆದ 6 ತಿಂಗಳಿಂದಲೂ ಸತಾಯಿಸುತ್ತಿದ್ದ ಹಿನ್ನಲೆಯಲ್ಲಿ ಸಂತ್ರಸ್ತ ಫಲಾನುಭವಿ ನರಸಿಂಹಯ್ಯ ಹಾಗೂ ಇತರೇ ಗ್ರಾಮಸ್ಥರು ತಾಪಂ ಮುತ್ತಿಗೆ ಹಾಕಿ ಖಾತೆ ವಿಳಂಬದ ಬಗ್ಗೆ ತಾಪಂ ಇಒ ಜಾನಕಿರಾಮ್‌ಗೆ ಪ್ರಶ್ನಿಸಿದರು. ಈ ವೇಳೆ ಕೆಲಸವಿದೆ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದರು. ಇದೇ ವೇಳೆ ಮಾತನಾಡಿದ ನರಸಿಂಹಯ್ಯ ತಾಲೂಕಿನ ಸಾಸಲಕುಂಟೆ ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ಪೆನ್ನೋಬನಹಳ್ಳಿಯ ವಾಸಿಯಾಗಿದ್ದು, ತಾವು ಹಾಗೂ ತಮ್ಮ ಕುಟುಂಬ ಸಮೇತ ಕಳೆದ 70ವರ್ಷದಿಂದ ಪೆನ್ನಮ್ಮನಹಳ್ಳಿ ಗ್ರಾಮದ ನಿವೇಶನದ ಮನೆಯಲ್ಲಿ ವಾಸವಿದ್ದೇವೆ. ಈ ಸಂಬಂಧ ಕಂದಾಯ ಇಲಾಖೆಯ ಶುಲ್ಕ ಪಾವತಿಸಿದ್ದೇವೆ. ಹೊಸ ಮನೆ ಕಟ್ಟುವ ಹಿನ್ನೆಲೆಯಲ್ಲಿ ಖಾತೆ ಮಾಡಿಕೊಡುವಂತೆ ಅಗತ್ಯ ದಾಖಲೆ ಸಮೇತ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದೇವೆ. ಈ ಸಂಬಂಧ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಪಿಡಿಒ, ಸ್ಥಳೀಯರೊಬ್ಬರ ವಿರೋಧದ ಹಿನ್ನಲೆಯಲ್ಲಿ ನಿವೇಶನದ ಖಾತೆ ಮಾಡಿಕೊಡಲು ಅನುಮತಿಗಾಗಿ ತಾಪಂಗೆ ದಾಖಲೆ ಸಲ್ಲಿಸಿದ್ದರು. ಇದಕ್ಕೆ ಪರಿಶೀಲಿಸಿ ಅನುಮತಿ ನೀಡಬೇಕಾದ ಇಒ ಜಾನಕಿರಾಮ್‌, ನಮ್ಮೂರಿನ ರಾಜಕೀಯ ಪ್ರೇರಣೆಗೆ ಒಳಗಾಗಿ ಖಾತೆ ನಿರ್ವಹಣೆಗೆ ಗ್ರಾಪಂ ಪಿಡಿಒಗೆ ಅನುಮತಿ ನೀಡದೇ ಸತಾಯಿಸುತ್ತಿರುವುದಾಗಿ ಆರೋಪಿಸಿದರು.

ಈ ಮುನ್ನ ನಿವೇಶದ ದಾಖಲೆ ಪರಿಶೀಲಿಸಿದ ತಾಪಂ ಇಒ ನಿವೇಶನ ದಾಖಲೆ ಸರಿ ಇದೆ. ನಿಮಗೆ ಖಾತೆ ಮಾಡಿಕೊಡಲು ಅಭ್ಯಂತರವಿಲ್ಲ. ಈ ಬಗ್ಗೆ ಪರಿಶೀಲಿಸಿದ್ದೇನೆ ಎಂದು ಬೇರೆ ಕಡೆ ಕರೆಸಿಕೊಂಡು ನನ್ನ ಜತೆ ವೈಯುಕ್ತಿಕವಾಗಿ ಚರ್ಚಿಸಿದ್ದರು. ಗ್ರಾಪಂನಿಂದ ನಿವೇಶನದ ಖಾತೆ ಮಾಡಿಕೊಡಲು ಅವಕಾಶ ಕಲ್ಪಿಸುತ್ತೇನೆ ಎಂದೆಲ್ಲಾ ಭರವಸೆ ನೀಡಿದ್ದರು. ಈಗ ಉಲ್ಚಾಹೊಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಳಲು ತೋಡಿಕೊಂಡರು.

ಈ ಬಗ್ಗೆ ದಾಖಲೆ ಸಮೇತ ಪ್ರಶ್ನಿಸಲು ತಾಪಂಗೆ ಕಚೇರಿಗೆ ಹೋದರೆ, ಉಡಾಫೆ ಉತ್ತರ ನೀಡಿ ಏನು ಬೇಕಾದರೂ ಮಾಡಿಕೊಳ್ಳಿ ನನ್ನಗೂ ಇದಕ್ಕೂ ಸಂಬಂಧವಿಲ್ಲ ಎಂದು ಕೈಚೆಲ್ಲಿ ಕಚೇರಿಯಿಂದ ವೇಗವಾಗಿ ಜಾಗ ಖಾಲಿ ಮಾಡಿದ್ದು, ಇವರು ಬಡವರಿಗೆ ನ್ಯಾಯ ಸಮ್ಮತ ಸಹಾಯ ಮಾಡುವಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ನಿಯಮನುಸಾರ ಖಾತೆ ಮಾಡಿಕೊಡುವಂತೆ ಶಾಸಕ ಎಚ್‌.ವಿ.ವೆಂಕಟೇಶ್‌ ಅವರು ಹೇಳಿದ್ದರೂ ಈ ಇಒ ಕ್ಯಾರೆ ಎನ್ನುತ್ತಿಲ್ಲ. ಇವರ ಉದ್ದೇಶವೇ ಅರ್ಥವಾಗುತ್ತಿಲ್ಲ. ಇವರು ಅಧಿಕಾರಿಯೋ ಇಲ್ಲ ರಾಜಕಾರಣಿಯೋ ಎಂಬ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಲೋಕಾಯುಕ್ತ ಹಾಗೂ ಜಿಪಂ ಸಿಇಒರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.

ತಾಲೂಕಿನ ಪೊನ್ನೋಬನಹಳ್ಳಿಯ ನರಸಿಂಹಯ್ಯ,ತಾವು ಅನುಭವದಲ್ಲಿದ್ದ ಜಾಗಕ್ಕೆ ಖಾತೆ ಮಾಡಿಕೊಡುವಂತೆ ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದು ಅನುಮತಿಗಾಗಿ ತಾಪಂ ಇಒಗೆ ದಾಖಲೆ ಸಲ್ಲಿಸಿದ್ದೇವೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ. ನಿವೇಶನಕ್ಕೆ ಸಂಬಂಧಿಸಿದಂತೆ ಕಿಮ್ಮತ್‌ ಕಟ್ಟಿದ ದಾಖಲೆ ನೀಡಿದರೆ ಅವರ ಸುತ್ತಾಳತೆಯ ಜಾಗಕ್ಕೆ ಖಾತೆ ಮಾಡಿಕೊಡಲು ಅಡ್ಡಿಯಿಲ್ಲ.

ಪಿಡಿಒ, ಸಾಸಲಕುಂಟೆ ಗ್ರಾಪಂ