ಹರಪನಹಳ್ಳಿ: ತಾಲೂಕಿನ ಕಂಚಿಕೆರೆ ಗ್ರಾಮದ ಕೋಡಿ ಸಿದ್ದೇಶ್ವರ ದೇವಸ್ಥಾನದಲ್ಲಿ 2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಕಂಚಿಕೆರೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರಿಗು ಮತ್ತು ಸಿಬ್ಬಂದಿ ವರ್ಗದವರಿಗೆ ವಿಜಯನಗರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯಿಂದ ದಿಶಾ ಕಮಿಟಿ ಸದಸ್ಯ ಶಾಂತ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಂಚಿಕೆರೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಬಂದಿರುವುದು ಹೆಮ್ಮೆಯ ವಿಷಯ. ಕಂಚಿಕೆರೆ ಗ್ರಾಪಂ, ಊರಿನ ಗ್ರಾಮಸ್ಥರ ಸಹಕಾರದಿಂದ ನರೇಗಾ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂದರು.ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಕಾರ್ಯಕ್ರಮಗಳನ್ನು ಸದ್ಭಳಕೆ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ₹1.43 ಕೋಟಿಗೂ ಹೆಚ್ಚು ವಹಿವಾಟು ಮಾಡಿ ಮರುಪಾವತಿ ಮಾಡಿರುವುದಕ್ಕೆ ನಮಗೆ ವಿಶೇಷ ಸಂತೋಷವಾಗಿದೆ ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಕಂಡ ರಾಮ ರಾಜ್ಯ ಕನಸನ್ನು ನನಸು ಮಾಡಬೇಕು. ನಮ್ಮ ದೇಶದ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಸಿಗಬೇಕು. ಗ್ರಾಮದ ಪ್ರತಿಯೊಂದು ಕೆಲಸಗಳು ಅಭಿವೃದ್ಧಿಯಾಗಬೇಕು ಎಂದು ಹೇಳಿದರು.ಶಾಸಕಿ ಎಂ.ಪಿ. ಲತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಸಿಗುತ್ತಿದೆ. ಕಂಚಿಕೆರೆ ಗ್ರಾಮ ಪಂಚಾಯಿತಿಗೆ ಗಾಂಧಿ ಪುರಸ್ಕಾರ ಸಿಕ್ಕಿರುವುದು ಸಂತೋಷದ ವಿಷಯ. ಮಹಿಳೆಯರು ಮಧ್ಯ ರಾತ್ರಿಯಲ್ಲಿ ಓಡಾಡುವ ಪರಿಸ್ಥಿತಿ ಬಂದರೆ ಅದು ರಾಮರಾಜ್ಯವಾಗುತ್ತದೆ. ಆ ದಿನ ಮಾತ್ರ ನಮಗೆ ಸ್ವತಂತ್ರ ಸಿಕ್ಕ ಹಾಗೆ ಹಾಗೂ ಅದು ಗಾಂಧೀಜಿಯವರ ಕನಸು ಕೂಡ ಆಗಿತ್ತು ಎಂದು ಹೇಳಿದರು.
ತಾಲೂಕಿನಲ್ಲಿ ನರೇಗಾ ಯೋಜನೆಯಡಿ 175 ಕೋಟಿ ಕೆಲಸ ಮಾಡಿ ರಾಜ್ಯದಲ್ಲಿಯೇ ಹರಪನಹಳ್ಳಿ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು. ಸ್ಮಶಾನಗಳ ಅಭಿವೃದ್ಧಿಯಾಗಿದೆ. ಮಹಿಳೆಯರು ಸಬಲೀಕರಣವಾಗಬೇಕಿದೆ ಎಂದು ಹೇಳಿದರು. ತಾಪಂ ಇಒ ವೈ.ಎಚ್. ಚಂದ್ರಶೇಖರ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಜಿ.ಅಶೋಕ್, ಉಪಾಧ್ಯಕ್ಷೆ ಲಲಿತಮ್ಮ ವೆಂಕಟೇಶ್, ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ದಿಶಾ ಕಮಿಟಿ ಸದಸ್ಯ ಶಾಂತಕುಮಾರ್ ರೆಡ್ಡಿ, ವಕೀಲರಾದ ರಹೀಮಾನ್ ಸಾಹೇಬ್, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರ್ ಗೌಡ, ಡಾ.ಬಿದ್ರಿ ಕೊಟ್ರೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಉದಯ್ ಶಂಕರ್, ಬಿದ್ರಿ ಸುನೀಲ್, ಪಿ.ಜಯಲಕ್ಷ್ಮಿ, ಸದ್ಯೋಜಾತಪ್ಪ, ನಾಗರಾಜ್, ಕರಿಬಸಯ್ಯ, ಪಿಡಿಒ ದುರುಗಪ್ಪ, ಗ್ರಾಪಂ ಸದಸ್ಯರು, ಮಹಿಳಾ ಸಂಘದವರು ಇದ್ದರು.