ಸಾರಾಂಶ
- ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ನಿಮಿತ್ತ ಜನಜಾಗೃತಿ ಸಭೆ । ರಾಮಾಯಣ ಕೆಲವರು ಒಪ್ಪದಿರಬಹುದು, ಆದರೆ ಜಗತ್ತೇ ಒಪ್ಪಿದೆ - - - ಕನ್ನಡಪ್ರಭ ವಾರ್ತೆ ಹರಿಹರ
ರಾಮಾಯಣದಲ್ಲಿನ ಸಮಾನತೆ, ಸಹೋದರತೆ, ಸತ್ಯ, ತ್ಯಾಗದ ಬಗ್ಗೆ ಹೇಳಿರುವ ಅಂಶಗಳನ್ನು ಅಂಬೇಡ್ಕರ್ ಸಂವಿಧಾನದಲ್ಲೂ ಅಳವಡಿಸಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ ನಿಮಿತ್ತ ಭಾನುವಾರ ನಡೆದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ದೇಶದಲ್ಲಿ ರಾಮಾಯಣವನ್ನು ಕೆಲವರು ಒಪ್ಪದಿರಬಹುದು, ಆದರೆ ಜಗತ್ತೇ ಒಪ್ಪಿದೆ. ರಾಮಾಯಣದ ಮೌಲ್ಯಗಳನ್ನು ನಮ್ಮ ಸಂವಿಧಾನದಲ್ಲೂ ಸೇರಿಸಲಾಗಿದೆ ಎಂದರು.
ಪ್ರಸನ್ನಾನಂದ ಶ್ರೀ ಸುಮಾರು ೪೦೦ ಕಿ.ಮೀ. ಪಾದಯಾತ್ರೆ ಮೂಲಕ ಬಂದಾಗ, ಸಮುದಾಯದ ೧೫ ಶಾಸಕರು ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸ್ವೀಕರಿಸಲು ಕರೆದರೂ ಅದು ಯಾಕೋ ಗೊತ್ತಿಲ್ಲ, ಅವರು ಬಂದು ಸ್ವೀಕರಿಸಲು ಒಪ್ಪಲಿಲ್ಲ. ಆಗ ಸರ್ಕಾರದ ಪರವಾಗಿ ನಾನೇ ಮನವಿ ಸ್ವೀಕರಿಸಿ, ಮೀಸಲಾತಿ ಕೊಡುವ ಭರವಸೆ ನೀಡಿದ್ದೆ ಎಂದರು.ಸಿಎಂ ಸಿದ್ದರಾಮಯ್ಯ ₹೧೬೦ ಕೋಟಿ ವ್ಯಯಿಸಿ, ಜಾತಿಗಣತಿ ಮಾಡಿಸಲು ಆದೇಶಿಸಿದಾಗ ಯಾರೂ ಪ್ರಶ್ನಿಸಲಿಲ್ಲ. ಆದರೆ, ಈಗ ವರದಿ ಬಿಡುಗಡೆ ಮಾಡಲು ಅನೇಕ ಸವಾಲುಗಳು ನಮ್ಮೆದುರು ಇವೆ. ಆದರೂ ಸಿದ್ದರಾಮಯ್ಯ ವರದಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಬಡವರಿಗೆ ಜಾರಿಗೊಳಿಸಿರುವ ಕಲ್ಯಾಣ ಯೋಜನೆಗಳ ಬಗ್ಗೆ ಕೆಲವರಿಗೆ ಅಸಮಾಧಾನವಿದೆ. ಆದರೆ ೫ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರವಾಗಿದೆ. ಗಂಗಾ ಕಲ್ಯಾಣ, ಸ್ವಯಂ ಉದ್ಯೋಗದ ಸಾಲ, ವಿದ್ಯಾರ್ಥಿ ವೇತನದಂತಹ ಹಣ ಲೂಟಿಯಾದರೆ ಹೇಗೆ? ಆಡಳಿತ ನಡೆಸುವವರಿಗೆ ಪ್ರಾಮಾಣಿಕತೆ ಇರಬೇಕು, ಜವಾಬ್ದಾರಿಯ ಅರಿವಿರಬೇಕು ಎಂದರು.ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ವಿತರಣಾ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದಿವಾಸಿ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಮಾಡಿದೆ. ೨.೪ ಕೋಟಿ ಪಕ್ಕಾ ಮನೆ ನಿರ್ಮಿಸುತ್ತಿದೆ. ೩೨ ಲಕ್ಷ ಎಸ್‌ಟಿ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಡಿಬಿಟಿ ಮೂಲಕ ವಿದ್ಯಾರ್ಥಿ ವೇತನ ಜಮೆ ಮಾಡುವ ಮೂಲಕ ಅವ್ಯಹಾರ ತಡೆದಿದೆ ಎಂದರು.
ಮಾಜಿ ಸಂಸದ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ರಾಮಾಯಣ ಬರೆದ ವಾಲ್ಮೀಕಿ, ಮಹಾಭಾರತ ರಚಿಸಿದ ವೇದವ್ಯಾಸರು, ಸಂವಿಧಾನ ರಚಿಸಿದ ಅಂಬೇಡ್ಕರ್ ಈ ಮೂವರು ಭಾರತದ ಆಧಾರಸ್ತಂಭಗಳು. ಅಯೋಧ್ಯೆಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರಿಟ್ಟಿದ್ದು ಬಿಜೆಪಿ ಎಂದರು.ಇಂತವರೇ ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕು, ಸಿಎಂ ಆಗಬೇಕು ಎಂಬುದೇನು ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶ್ರೀರಾಮುಲು ಆಗಲಿ, ರಮೇಶ್ ಜಾರಕಿಹೊಳಿ ಆಗಲಿ ಒಳ್ಳೆಯದೇ. ಒಟ್ಟಿನಲ್ಲಿ ಜೀ ಹುಜೂರ್ ಎನ್ನುವವರು, ನಾಟಕ ಮಾಡುವವರು ಆಗಬಾರದು. ಸ್ವತಂತ್ರ‍್ಯವಾಗಿ ಕಾರ್ಯನಿರ್ವಹಿಸುವವರಿಗೆ ಸ್ಥಾನಮಾನಗಳು ಸಿಗಬೇಕು ಎಂದರು.
ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಜೆಟ್‍ನಲ್ಲಿ ಶೇ.೨೪.೧ ರಷ್ಟು ಮೊತ್ತವನ್ನು ಎಸ್ಸಿ-ಎಸ್ಟಿ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಬದ್ಧವಾಗಿದೆ ಎಂದರು.ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೇವಸ್ಥಾನ ನಿರ್ಮಿಸಲು ವಾಲ್ಮೀಕಿ ರಾಮಾಯಣವೇ ಕಾರಣ. ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮಹರ್ಷಿ ವಾಲ್ಮೀಕಿ ಹೆಸರಿಟ್ಟಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಶ್ರೀಗಳ ಆಶಯದಂತೆ ವಾಲ್ಮೀಕಿ ಸಮಾಜದ ಮೀಸಲಾತಿ ಹೆಚ್ಚಿಸಿದೆ ಎಂದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಜನಸಂಖ್ಯೆ ಆಧಾರದಲ್ಲಿ ನೋಡಿದರೆ, ವಾಲ್ಮೀಕಿ ಸಮಾಜ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಬೇಕಿದೆ. ಎಲ್ಲ ಕ್ಷೇತ್ರಗಳಲ್ಲೂ ಸೂಕ್ತ ಪ್ರಾತಿನಿಧ್ಯ ಪಡೆದುಕೊಳ್ಳಬೇಕಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ವಾಲ್ಮೀಕಿ ಜಾತ್ರೆ ಕೇವಲ ಧಾರ್ಮಿಕಪ್ರಜ್ಞೆ ಬೆಳೆಸುವುದಿಲ್ಲ. ಮೌಢ್ಯಗಳನ್ನು ಕಳೆದು, ವೈಚಾರಿಕತೆ ಬೆಳೆಸುವ ಜಾತ್ರೆ. ಜನರಲ್ಲಿ ಜಾಗೃತಿ ಮೂಡಿಸಿ, ಸಂಘಟಿತಗೊಳಿಸಿ, ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು ಸಜ್ಜುಗೊಳಿಸುವ ಜಾತ್ರೆ ಎಂದರು.
ಸಚಿವರಾದ ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಕೆ.ಎನ್.ರಾಜಣ್ಣ, ಶಾಸಕ ಯತೀಂದ್ರ, ಜಾತ್ರಾ ಸಮಿತಿ ಅಧ್ಯಕ್ಷ ಬಿ.ದೇವೇಂದ್ರಪ್ಪ, ಶಾಸಕರಾದ ಶಾಂತನಗೌಡ, ಬಿ.ಪಿ.ಹರೀಶ್, ಯಾಸೀರ್ ಖಾನ್ ಪಠಾಣ್, ಪ್ರಕಾಶ್ ಕೋಳಿವಾಡ, ಶ್ರೀನಿವಾಸ ಮಾನೆ, ರಾಜುಗೌಡ, ಮದನಗೋಪಾಲ ನಾಯಕ್, ನಿಕೇತ್‍ರಾಜ್, ಲತಾ ಪ್ರಕಾಶ್, ಟಿ.ರಘುಮೂರ್ತಿ, ಯು.ಬಿ.ಬಣಕಾರ್, ಬಸವಂತಪ್ಪ, ಮಾಜಿ ಸಂಸದರಾದ ಬಿ.ವಿ.ನಾಯಕ್, ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕರಾದ ಎಸ್.ರಾಮಪ್ಪ, ಅರುಣ್‍ಕುಮಾರ ಪೂಜಾರ್, ರೇಣುಕಾಚಾರ್ಯ ಇತರರಿದ್ದರು.- - -
ಬಾಕ್ಸ್* ಬಿಜೆಪಿ ಸ್ವಂತ ಶಕ್ತಿಯಿಂದ ಗೆದ್ದಿಲ್ಲ: ಸಚಿವ ರಾಜಣ್ಣ
ಹರಿಹರ: ದೆಹಲಿ ಚುನಾವಣೆಯಲ್ಲಿ ಕಳೆದ ಚುನಾವಣೆಗಿಂತ ಈ ಬಾರಿ ಮತದಾರರು ಎರಡೂವರೆ ಲಕ್ಷ ಹೆಚ್ಚು ಮತ ನೀಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ನುಡಿದರು. ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಆಮ್ ಆದ್ಮಿ ಪಕ್ಷ ಸುಮಾರು ೧೫ ಕ್ಷೇತ್ರಗಳಲ್ಲಿ ಸೋತಿರುವುದು ಕಾಂಗ್ರೆಸ್ ಮತ ವಿಭಜನೆಯಿಂದ, ಬಿಜೆಪಿಯವರು ಸ್ವಂತ ಶಕ್ತಿಯಿಂದ ಗೆದ್ದಿಲ್ಲ. ಕೆಲವೊಮ್ಮೆ ಎಲ್ಲ ಪಕ್ಷಗಳಲ್ಲೂ ತಪ್ಪುಗಳಾಗುತ್ತವೆ. ಅಂಥ ಸಂದರ್ಭದಲ್ಲಿ ಅದನ್ನೇ ಮುಂದಿಟ್ಟುಕೊಂಡು ಶತ್ರುಗಳು ಬಲಿಷ್ಠರಾಗುತ್ತಾರೆ, ಇದೇ ದೆಹಲಿಯಲ್ಲಿ ಆಗಿದೆ ಎಂದರು.- - - -೯ಎಚ್‍ಆರ್‌ಆರ್೦೪:
ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ ನಿಮಿತ್ತ ಭಾನುವಾರ ನಡೆದ ಜನಜಾಗೃತಿ ಸಭೆಯನ್ನು ಗೃಹ ಸಚಿವ ಜಿ.ಪರಮೇಶ್ವರ ಉದ್ಘಾಟಿಸಿದರು.