ಸಾರಾಂಶ
ಸಾಮಾಜಿಕ ನ್ಯಾಯ ನಮ್ಮೆಲ್ಲರ ಮೂಲಭೂತ ಹಕ್ಕು. ಈ ಹಕ್ಕು ಉಲ್ಲಂಘನೆ ಆಗದೆ ನೋಡಿಕೊಳ್ಳುವುದು ಅಧಿಕಾರಿಗಳ, ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಈ ಸಾಮಾಜಿಕ ನ್ಯಾಯವನ್ನು ಸಂವಿಧಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಳವಡಿಸಿದ್ದಾರೆ.
ಯಲಬುರ್ಗಾ:
ಸರ್ವರಿಗೂ ಸಮಬಾಳು, ಸಮಪಾಲು, ಸಮಾನತೆಯಿಂದ ಕಾಣುವುದೇ ಸಾಮಾಜಿಕ ನ್ಯಾಯವಾಗಿದೆ ಎಂದು ಸ್ಥಳೀಯ ನ್ಯಾಯಾಲಯದ ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.ಪಟ್ಟಣದ ಬಿಸಿಎಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯ ನಮ್ಮೆಲ್ಲರ ಮೂಲಭೂತ ಹಕ್ಕು. ಈ ಹಕ್ಕು ಉಲ್ಲಂಘನೆ ಆಗದೆ ನೋಡಿಕೊಳ್ಳುವುದು ಅಧಿಕಾರಿಗಳ, ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಈ ಸಾಮಾಜಿಕ ನ್ಯಾಯವನ್ನು ಸಂವಿಧಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಳವಡಿಸಿದ್ದಾರೆ ಎಂದರು.ಸಮಾಜದಲ್ಲಿ ಅನೇಕ ಜನರು ಕಾನೂನಿನ ಜ್ಞಾನವಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಕಾನೂನಿನ ಜ್ಞಾನ ಬೇಕಾಗಿದೆ. ಸಮಾಜದ ಎಲ್ಲರಿಗೂ ಸಮಾನ ಅವಕಾಶ ಹಾಗೂ ಸವಲತ್ತು ಸಿಗಬೇಕು. ಇದು ಯಾರೋ ಒಬ್ಬರಿಂದ ಆಗುವ ಕೆಲಸ ಅಲ್ಲ. ಎಲ್ಲರೂ ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೆಲೇರಿ, ಜಾತಿ, ಮತ, ಧರ್ಮದ ತಾರತಮ್ಯ ಇಲ್ಲ. ಪಿರ್ತಾಜಿತ ಹಾಗೂ ಗಳಿಸಿದ ಸಂಪತ್ತಿನಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಾನೂನಿನಲ್ಲಿದೆ. ಇದರಿಂದ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ ಎಂದರು.ಅತಿಥಿಗಳಾಗಿ ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ತಾಲೂಕು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಶಿವಶಂಕರ ಕರಡಕಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿ, ವಕೀಲರಾದ ಈರಣ್ಣ ಕೋಳೂರು, ಎ.ಎಂ. ಪಾಟೀಲ್, ಬಸವರಾಜ ಹಾಳಕೇರಿ ಇದ್ದರು.