ಮಾನವ ಕಳ್ಳಸಾಗಾಣಿಕೆ ನಿರ್ಮೂಲನೆ ಎಲ್ಲರ ಜವಾಬ್ದಾರಿ

| Published : Jul 31 2025, 12:45 AM IST

ಸಾರಾಂಶ

ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆಯನ್ನು ನಿರ್ಮೂಲನೆ ಮಾಡುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್‌ ಹೇಳಿದರು.

ಶಿವಮೊಗ್ಗ: ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆಯನ್ನು ನಿರ್ಮೂಲನೆ ಮಾಡುವುದು ನಾಗರಿಕ ಸಮಾಜದ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್‌ ಹೇಳಿದರು.ಇಲ್ಲಿನ ಡಿ.ಎ.ಆರ್.ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮುಕ್ತಿ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ನಗರದ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಮತ್ತು ಜಿಲ್ಲಾಮಟ್ಟದ ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯ ಕ್ಷೇತ್ರವ್ಯಾಪ್ತಿ ಮತ್ತು ಜನಸಂಖ್ಯೆಯನ್ನು ಅವಲೋಕಿಸಿದಾಗ ಗುರುತಿಸಲಾದ ಮಾನವ ಕಳ್ಳ ಸಾಗಾಣಿಕೆಯ ಪ್ರಕರಣಗಳು ತೀರಾ ಅತ್ಯಲ್ಪ ಎನ್ನಬಹುದಾದರೂ, 15 ದಿನಗಳ ಅವಧಿಯಲ್ಲಿ ಸ್ವತಃ ೨ಪ್ರಕರಣಗಳನ್ನು ಗಮನಿಸಲಾಗಿದೆ. ಈ ಪ್ರಕರಣಗಳನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿ, ಅದರ ತೀವ್ರತೆಯನ್ನು ಅರಿತು ತ್ವರಿತವಾಗಿ ಮೊಕದ್ದಮೆಗಳನ್ನು ದಾಖಲಿಸಬೇಕು. ವಿಳಂಬವಾದಲ್ಲಿ ಅದರ ಮಹತ್ವ ಕಳೆದುಹೋಗಿ, ವಿಚಾರಣೆ ಹಂತದಲ್ಲಿ ಹಲವು ಕಾರಣಗಳಿಂದಾಗಿ ಬಿದ್ದುಹೋಗಬಹುದಾದ ಸಂಭವ ಹೆಚ್ಚಾಗಲಿದೆ ಎಂದರು.ಕೆಲವು ವಿಷಯಗಳಲ್ಲಿ ಅಮಾನತ್ತುಪಡಿಸಲಾದ ವಸ್ತುಗಳು, ಸಾಂದರ್ಭಿಕ ಸಾಕ್ಷ್ಯಗಳು, ಸಾಕ್ಷಿಗಳು ಸಾಮಾಜಿಕ ಜವಾಬ್ದಾರಿ ಉಳ್ಳವರಾಗಿರಬೇಕು. ಇಲ್ಲದಿದ್ದಲ್ಲಿ ವಿಚಾರಣೆ, ಸಾಕ್ಷ್ಯಗಳಿಲ್ಲದೆ ಹೋಗುವ ಆತಂಕವು ಇಲ್ಲದಿಲ್ಲ ಎಂದರು,

ಈ ಮಹತ್ವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರೂ ಸಂತ್ರಸ್ತ ವ್ಯಕ್ತಿ ಅಥವಾ ಕುಟುಂಬಕ್ಕೆ ನ್ಯಾಯೋಚಿತವಾದ ಪರಿಹಾರ ಕೊಡಿಸಲು, ಅವರ ನೆಮ್ಮದಿಯ ಬದುಕಿಗೆ ಆಸರೆಯಾಗಬೇಕು. ಈ ವಿಷಯದಲ್ಲಿ ಸರ್ಕಾರ, ಸಂಘ-ಸಂಸ್ಥೆಗಳೊಂದಿಗೆ ಸಾರ್ವಜನಿಕರೂ ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಂ.ಎಸ್.ಸಂತೋಷ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಜಿ.ಎ.ಕಾರಿಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಸ್.ನಟರಾಜ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಆರ್.ಮಂಜುನಾಥ್, ಮುಕ್ತಿ ಸಂಸ್ಥೆಯ ಸಂಯೋಜಕಿ ಸುಧಾ, ಶಶಿರೇಖಾ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಅವರು ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಬಿಳಿ ಪರದೆಯ ಮೇಲೆ ಸಹಿ ಮಾಡುವ ಮೂಲಕ ಮಾನವ ಕಳ್ಳ ಸಾಗಾಣಿಕೆ ತಡೆಯುವುದನ್ನು ಬೆಂಬಲಿಸಿದರು.