ಶಿಕ್ಷಣದಲ್ಲಿನ ಜಾತಿಯತೆ ನಿರ್ಮೂಲನೆ ಗಣತಂತ್ರ ಭಾರತದ ಅಗತ್ಯ: ರಮೇಶ್ ಬಳೂಟಗಿ

| Published : Jan 30 2025, 12:31 AM IST

ಶಿಕ್ಷಣದಲ್ಲಿನ ಜಾತಿಯತೆ ನಿರ್ಮೂಲನೆ ಗಣತಂತ್ರ ಭಾರತದ ಅಗತ್ಯ: ರಮೇಶ್ ಬಳೂಟಗಿ
Share this Article
  • FB
  • TW
  • Linkdin
  • Email

ಸಾರಾಂಶ

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿರುವ ಜಾತಿಯತೆಯ ನಿರ್ಮೂಲನೆ ಗಣತಂತ್ರ ಭಾರತದ ಬಹುದೊಡ್ಡ ಅಗತ್ಯ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿರುವ ಜಾತಿಯತೆಯ ನಿರ್ಮೂಲನೆ ಗಣತಂತ್ರ ಭಾರತದ ಬಹುದೊಡ್ಡ ಅಗತ್ಯ ಎಂದು ಪ್ರಗತಿಪರ ಕೃಷಿಕ ರಮೇಶ್ ಬಳೂಟಗಿ ಪ್ರತಿಪಾದಿಸಿದರು.

ಪಟ್ಟಣದ ಎಸ್‌ವಿಸಿ ಶಿಕ್ಷಣ ಸಂಸ್ಥೆಗಳು ಆಯೋಜಿಸಿದ 76ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಜಾತಿ ಪದ್ಧತಿ ನಿರ್ಮೂಲನೆ ಸಂವಿಧಾನದ ಆಶಯಗಳಲ್ಲೊಂದು. ಈ ಸಮಸ್ಯೆ ಏಳು ದಶಕದ ನಂತರವೂ ಜೀವಂತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿಯತೆ ಬೃಹದಾಕಾರವಾಗಿ ಬೆಳೆದಿದೆ. ಇದನ್ನು ಉನ್ನತ ಶಿಕ್ಷಣ ರಂಗದಿಂದ ನಿರ್ಮೂಲನೆ ಮಾಡುವುದೇ ನಾವು ಸಂವಿಧಾನಕ್ಕೆ ತೋರಿಸುವ ನಿಜವಾದ ಗೌರವ ಎಂದು ಹೇಳಿದರು.

ಸುಮಾರು ಎರಡುವರೆ ವರ್ಷಗಳ ಕಾಲ ಸತತ ಪರಿಶ್ರಮ ಹಾಗೂ ಅಧ್ಯಯನದ ಪ್ರತಿಫಲವೇ ಭಾರತ ಸಂವಿಧಾನ.‌ ವಿಶ್ವದ ಶ್ರೇಷ್ಠ ಸಂವಿಧಾನವೆಂದು ಗುರುತಿಸಿಕೊಂಡಿರುವ ಅದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಗಣತಂತ್ರದ ಆಶಯಗಳಾದ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಐಕ್ಯತೆಗಳು ಇನ್ನೂ ನಮ್ಮಲ್ಲಿ ಬಲಿಷ್ಠವಾಗಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಸಂಸ್ಥೆಯ ಸಿಇಒ ಜಗದೀಶ್ ಅಂಗಡಿ ಮಾತನಾಡಿ, ಪ್ರತಿನಿತ್ಯ ಸಂವಿಧಾನದ ಪೀಠಿಕೆಯನ್ನು ಓದಿ ಅದರ ಆಶಯಗಳನ್ನು ಅಳವಡಿಸಿಕೊಂಡರೆ ದೇಶ ತಾನಾಗಿಯೇ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.

ಎಸ್‌ವಿಸಿ ಶಾಲೆಗಳ ಶೈಕ್ಷಣಿಕ ನಿರ್ದೇಶಕ ಭೀಮರಾವ್ ಕುಲಕರ್ಣಿ, ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಪ್ರಶಾಂತ ಹಿರೇಮಠ, ಎಸ್‌ವಿಸಿ ಶಿಕ್ಷಣ ಕಾಲೇಜು ಪ್ರಾಂಶುಪಾಲ ಡಾ. ಎಸ್.ಸಿ. ತಿಪ್ಪಾಶೆಟ್ಟಿ ಉಪಸ್ಥಿತರಿದ್ದರು. ಸಂವಿಧಾನದ ಮೌಲ್ಯಗಳ ಕುರಿತು ಮಕ್ಕಳು ಆಕರ್ಷಕ ಸಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು‌. ಅಲಿ ನವಾಜ್ ಸ್ವಾಗತಿಸಿದರು. ಜ್ಯೋತಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.