ಆರೋಗ್ಯವಂತ ಮಗು ದೇಶದ ಆಸ್ತಿಯಾಗಿದ್ದು, ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವುದು ಕೇವಲ ಒಂದು ಕುಟುಂಬದ ಜವಾಬ್ದಾರಿಯಲ್ಲ, ಅದು ಇಡೀ ಸಮಾಜ ಮತ್ತು ಸರ್ಕಾರದ ಕರ್ತವ್ಯವಾಗಿದೆ, ಪೌಷ್ಟಿಕ ಆಹಾರ ಮತ್ತು ಉತ್ತಮ ಆರೋಗ್ಯಕರ ವಾತಾವರಣ ಕಲ್ಪಿಸಿಕೊಡುವ ಮೂಲಕ ನಾವು ಸದೃಢ ಭಾರತ ನಿರ್ಮಿಸಬಹುದಾಗಿದೆ ಎಂದು ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ಯಾಡಗಿ: ಆರೋಗ್ಯವಂತ ಮಗು ದೇಶದ ಆಸ್ತಿಯಾಗಿದ್ದು, ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವುದು ಕೇವಲ ಒಂದು ಕುಟುಂಬದ ಜವಾಬ್ದಾರಿಯಲ್ಲ, ಅದು ಇಡೀ ಸಮಾಜ ಮತ್ತು ಸರ್ಕಾರದ ಕರ್ತವ್ಯವಾಗಿದೆ, ಪೌಷ್ಟಿಕ ಆಹಾರ ಮತ್ತು ಉತ್ತಮ ಆರೋಗ್ಯಕರ ವಾತಾವರಣ ಕಲ್ಪಿಸಿಕೊಡುವ ಮೂಲಕ ನಾವು ಸದೃಢ ಭಾರತ ನಿರ್ಮಿಸಬಹುದಾಗಿದೆ ಎಂದು ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಪೋಷಣ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಲಿಷ್ಠ ಮತ್ತು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಅಗತ್ಯವಾಗಿದೆ, ಆದರೆ ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಕಂಡು ಬರುತ್ತಿರುವ ಅಪೌಷ್ಟಿಕತೆ ದೇಶಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಸಿಗದಿದ್ದಾಗ ಅಂತಹ ಮಕ್ಕಳಲ್ಲಿ ಅಪೌಷ್ಟಿಕತೆ ಲಕ್ಷಣಗಳು ಕಾಣುತ್ತವೆ. ಅಪೌಷ್ಟಿಕತೆ ನಿವಾರಿಸಿ ಆರೋಗ್ಯ ಸುಧಾರಣೆ ಮಾಡುವುದು ಮತ್ತು ಅವರಿಗೆ ಸೂಕ್ತ ಪೌಷ್ಟಿಕ ಆಹಾರವನ್ನು ಒದಗಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.ಬಡತನವೊಂದೇ ಕಾರಣವಲ್ಲ: ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗಲು ಕೇವಲ ಬಡತನವೊಂದೇ ಕಾರಣವಲ್ಲ, ಬದಲಿಗೆ ಆಹಾರದಲ್ಲಿ ಪ್ರೋಟೀನ್, ವಿಟಾಮಿನ್ ಮತ್ತು ಖನಿಜಾಂಶಗಳ ಕೊರತೆಯಿಂದ ಅಸಮತೋಲಿತ ಆಹಾರ ಪದ್ಧತಿ ಸೇರಿದಂತೆ ತಾಯಂದಿರಿಗೆ ಮಗುವಿನ ಸರಿಯಾದ ಪೋಷಣೆ ಮತ್ತು ಎದೆ ಹಾಲು ಉಣಿಸುವಿಕೆ ಬಗ್ಗೆ ಜ್ಞಾನದ ಕೊರತೆ, ಕಲುಷಿತ ನೀರು ಮತ್ತು ಅಶುಚಿತ್ವದಿಂದಾಗಿ ಮಕ್ಕಳಿಗೆ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗಿ ಪೋಷಕಾಂಶಗಳು ದೇಹಕ್ಕೆ ಸೇರುವುದಿಲ್ಲ ಇದರಿಂದಲೂ ಅಪೌಷ್ಟಿಕತೆ ಉಂಟಾಬಹುದು ಎಂದರು.
ಜಂಕ್ ಫುಡ್ ಸಂಸ್ಕೃತಿ ನಿಲ್ಲಿಸಿ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಪ್ಯಾಕೆಟ್ ಆಹಾರ, ಬೇಕರಿ ತಿಂಡಿಗಳಿಗೆ ಮಾರು ಹೋಗುತ್ತಿದ್ದು ಪೌಷ್ಟಿಕ ಆಹಾರದಿಂದ ದೂರ ಉಳಿಯುತ್ತಿದ್ದಾರೆ, ಸಿರಿಧಾನ್ಯಗಳಾದ ರಾಗಿ, ಗೋಧಿ, ಕೆಂಪಕ್ಕಿ ಮತ್ತು ಮೂಳೆ ಹಾಗೂ ಸ್ನಾಯುಗಳಿಗೆ ಶಕ್ತಿ ನೀಡಲಿವೆ, ಅದರಲ್ಲೂ ವಿಶೇಷವಾಗಿ ''''''''ರಾಗಿ'''''''' ಮಕ್ಕಳ ಆರೋಗ್ಯಕ್ಕೆ ಸಂಜೀವಿನಿಯಾಗಿದ್ದು, ಅಂಗನವಾಡಿಗಳ ಮೂಲಕ ಸಿಗುವ ಬಾಲಾಮೃತ, ಬಿಸಿಯೂಟ ಮತ್ತು ಮಾತೃವಂದನಾ ಯೋಜನೆಗಳಂತಹ ಸೌಲಭ್ಯಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.ಸಮನ್ವಯದಿಂದ ಕಾರ್ಯ ನಿರ್ವಹಿಸಿ: ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ವಹಣಾ ಅಧಿಕಾರಿ ಶೈಲಾ ಹೂಲಿಹಳ್ಳಿ ಮಾತನಾಡಿ, ಅಪೌಷ್ಟಿಕತೆ ನಿವಾರಣೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಪೌಷ್ಟಿಕ ಆಹಾರದ ಮಹತ್ವದ ಕುರಿತು ಅರಿವು ಮೂಡಿಸಿ ಸರ್ಕಾರದ ಪೋಷಣಾ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಈ ವೇಳೆ ಸಿಡಿಪಿಓ ಚಂದ್ರಶೇಖರ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ತಾಲೂಕು ಆರೋಗ್ಯಾಧಿಕಾರಿ ಕಾಂತೇಶ ಭಜಂತ್ರಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.