ಸಾರಾಂಶ
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಜಾತ್ಯತೀತ ಸಮಾಜ ನಿರ್ಮಿಸಲು ಪಣತೊಟ್ಟರು. ಸಮಾಜ ಅಭಿವೃದ್ಧಿ ಆಗಬೇಕಾದರೆ ಜಾತಿ ಅಡ್ಡಿಯಾಗಬಾರದು. ಈ ಹಿನ್ನೆಲೆಯಲ್ಲಿ ಬಡವರು, ಶೋಷಿತ ವರ್ಗದವರು, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸಾಮೂಹಿಕ ವಿವಾಹದಿಂದ ತುಂಬ ಲಾಭವಾಗುತ್ತದೆ.
ಮುನಿರಾಬಾದ್: ಸಾಮೂಹಿಕ ವಿವಾಹದಿಂದ ಬಡತನ ನಿರ್ಮೂಲನೆ ಹಾಗೂ ಸಮಾಜದಲ್ಲಿ ಸಾಮರಸ್ಯ ತರಲು ಸಾಧ್ಯ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ನುಡಿದರು.
ಅವರು ಬುಧವಾರ ಹುಲಿಗೆಮ್ಮ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಹಿಂದೂ ಧರ್ಮ ದತ್ತಿ ಇಲಾಖೆಯಿಂದ ಆಯೋಜಿಸಲಾದ ಮಾಂಗಲ್ಯ ಭಾಗ್ಯ ಯೋಜನೆ ಅಡಿ ಹಮ್ಮಿಕೊಳ್ಳಲಾದ ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಜಾತ್ಯತೀತ ಸಮಾಜ ನಿರ್ಮಿಸಲು ಪಣತೊಟ್ಟರು. ಸಮಾಜ ಅಭಿವೃದ್ಧಿ ಆಗಬೇಕಾದರೆ ಜಾತಿ ಅಡ್ಡಿಯಾಗಬಾರದು. ಈ ಹಿನ್ನೆಲೆಯಲ್ಲಿ ಬಡವರು, ಶೋಷಿತ ವರ್ಗದವರು, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸಾಮೂಹಿಕ ವಿವಾಹದಿಂದ ತುಂಬ ಲಾಭವಾಗುತ್ತದೆ ಎಂದರು.
ರಾಜ್ಯದ 233 ತಾಲೂಕುಗಳ ಪೈಕಿ 216 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿ ಮಾಡಿದ 5 ಗ್ಯಾರಂಟಿ ಯೋಜನೆಗಳು ಬಡಜನರ ಬಡತನ ಓಡಿಸುವ ನಿಟ್ಟಿನಲ್ಲಿ ತುಂಬ ಸಹಕಾರಿಯಾಗಿದೆ ಎಂದರು.ಇಂದು ಹೊಸ ಜೀವನಕ್ಕೆ ಕಾಲಿಟ್ಟ 69 ನವವಿವಾಹಿತರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಮಂಜುಳ ಕರಡಿ, ಹೆಣ್ಣುಮಕ್ಕಳು ವಯಸ್ಸಿಗೆ ಬಂದಾಗ ಪಾಲಕರಿಗೆ ಅವರ ಮಗಳ ಮದುವೆಯ ಚಿಂತೆ ಕಾಡಲು ಪ್ರಾರಂಭಿಸುತ್ತದೆ. ಮಾಂಗಲ್ಯ ಭಾಗ್ಯ ಯೋಜನೆಯು ಬಡವರ ಪಾಲಿಗೆ ವರದಾನವಾಗಿದೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಹೇಳಿದರು.ಗ್ರಾಮದ ಯುವಕ ಸಂತೋಷ, 69 ನವ ಜೋಡಿಗಳಿಗೆ ಶಾಸಕರ ಮುಖಾಂತರ ಸಸಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಎಡಿಸಿ ಸಾವಿತ್ರಿ ಕಡಿ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಸುತಗುಂಡಿ, ಹುಲಿಗೆಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ವೀರೇಶ ಈಳಿಗೇರ, ದೇವಸ್ಥಾನ ಸಮಿತಿಯ ಸದಸ್ಯರಾದ ಪಂಪನಗೌಡ ಪಾಟೀಲ, ನಾಗರಾಜ ಭಟ್ಟ ಜೋಷಿ, ಶೇಖರಪ್ಪ ಸಿಂದೋಗಿ, ಸುಜಾತ ಶಂಕ್ರಪ್ಪ, ಅನಿತಾ ಯಮನೂರಪ್ಪ, ಪರಶುರಾಮ, ಜಿಪಂ ಮಾಜಿ ಅಧ್ಯಕ್ಷ ಟಿ.ಜನಾರ್ದನ, ತಾಲೂಕು ಮಾಜಿ ಸದಸ್ಯ ಪಾಲಕ್ಷಪ್ಪ ಗುಂಗಾಡಿ, ಮಪ್ರಭುರಾಜ ಪಾಟೀಲ ಉಪಸ್ಥಿತರಿದ್ದರು.