ಸಾರಾಂಶ
ಭಟ್ಕಳ:
ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಶಿಕ್ಷೆಗೊಳಪಟ್ಟ ವ್ಯಕ್ತಿಯೋರ್ವ ತಪ್ಪಿಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದು, ೧೨ ವರ್ಷಗಳ ನಂತರ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಜೈಲಿಗೆ ಕಳುಹಿಸಿದ ಘಟನೆ ನಡೆದಿದೆ.ಮುರುರ್ಡೇಶ್ವರದ ನೂರ್ ಕಾಲನಿ ನಿವಾಸಿ ಶಕೀಲ್ ಅಹಮ್ಮದ್ ತಂದೆ ಮೊಹಮ್ಮದ್ ಸೈಯದ್(೩೯) ೨೦೦೯ರಲ್ಲಿ ಶಿರಾಲಿಯ ಸಾರದಹೊಳೆ ಸೇತುವೆ ಮೇಲೆ ತನ್ನ ಮೋಟಾರ್ ಬೈಕ್ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ನಂತರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆ ಮಾಡಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯ ಆತನಿಗೆ ೧ ವರ್ಷ ೩ ತಿಂಗಳು ಸಾದಾ ಶಿಕ್ಷೆ ಹಾಗೂ ₹೬ ಸಾವಿರ ದಂಡ ವಿಧಿಸಿದ್ದು, ಆದರೆ ಆರೋಪಿಯು ಅಪೀಲು ಸಲ್ಲಿಕೆಗೆ ನೀಡಿದ ಸಮಯವನ್ನೇ ದುರುಪಯೋಗಪಡಿಸಿಕೊಂಡು ವಿದೇಶಕ್ಕೆ ಹೋಗಿ ಉದ್ಯೋಗ ಮಾಡಿಕೊಂಡಿದ್ದ. ೨೦೨೩ರಲ್ಲಿ ಆತನ ವಿರುದ್ಧ ಕ್ರಮ ಕೈಗೊಂಡ ಪೊಲೀಸರು, ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಎಲ್ಲ ವಿಮಾನ ನಿಲ್ದಾಣಗಳಿಗೆ ಆತನ ಪತ್ತೆಗೆ ಸಹಕರಿಸುವಂತೆ ಕೋರಿದ್ದರು. ಆ ಪ್ರಕಾರ ಆರೋಪಿಯು ಭಾರತಕ್ಕೆ ಬರುತ್ತಿದ್ದಂತೆ ಸಿಕ್ಕಿಬಿದ್ದಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು ಕಾರವಾರ ಜೈಲಿಗೆ ಕಳಿಸಲಾಗಿದೆ.ಎಸ್‌ಪಿ ಎಂ. ನಾರಾಯಣ, ಹೆಚ್ಚುವರಿ ಎಸ್‌ಪಿ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಚಂದನಗೋಪಾಲ, ಎಚ್.ಸಿ. ಅಶೋಕ ನಾಯ್ಕ ಸೇರಿದಂತೆ ಗ್ರಾಮೀಣ ಠಾಣೆಯ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಸಿದ್ದಾಪುರದಲ್ಲಿ ಅಡಕೆ ಕಳ್ಳರ ಬಂಧನಸಿದ್ದಾಪುರ: ತಾಲೂಕಿನ ಇಟಗಿ ಹಾಗೂ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಕೆ ಕಳ್ಳತನ ಮಾಡಿದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ₹೧,೨೦,೦೦೦ ಮೌಲ್ಯದ ೪ ಕ್ವಿಂಟಲ್ ಅಡಕೆ ಹಾಗೂ ಕಳ್ಳತನಕ್ಕೆ ಬಳಸಿದ ಎಸ್ಟೀಮ್ ಕಾರು, ಹಿರೋ ಸ್ಪೆಂಡ್ಲರ್ ಮೋಟಾರ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಇಟಗಿಯ ಆಲದಕಟ್ಟೆಯ ಮಹಮ್ಮದ್ ಶಫಿ ಅಬ್ದುಲ್ ಅಜೀಂ ಸಾಬ್ ಎನ್ನುವವರು ತಮ್ಮ ಅಡಕೆ ಕಳುವಾದ ಬಗ್ಗೆ ದೂರು ನೀಡಿದ್ದು, ಅದರ ತನಿಖೆ ನಡೆಸಿದ ಪೊಲೀಸರು ಸೆಂಟ್ರಿಂಗ್ ಕೆಲಸ ಮಾಡುವ ಬಿಳಗಿ ಸಮೀಪದ ಹೊಸಮಂಜುವಿನ ಅಖ್ತರ್ ರಝಾ ರಫೀಕ್ ಸಾಬ್ (೨೦), ಇಟಗಿ ಆಲದಕಟ್ಟೆಯ ಇಮ್ರಾನ್ ಶೇಖ್ ಹುಸೇನ್ ಸಾಬ್ (೨೪) ಎನ್ನುವವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ವಾಹನ ಮತ್ತು ಕಳ್ಳತನವಾದ ಅಡಕೆ ವಶಕ್ಕೆ ಪಡೆದಿದ್ದಾರೆ.ಎಸ್.ಪಿ. ಎಂ. ನಾರಾಯಣ, ಅಡಿಷನಲ್ ಎಸ್.ಪಿ. ಜಯಕುಮಾರ, ಜಗದೀಶ ನಾಯ್ಕ, ಡಿ.ವೈ.ಎಸ್.ಪಿ. ಗಣೇಶ ಕೆ.ಎಲ್. ಅವರ ಮಾರ್ಗದರ್ಶನದಲ್ಲಿ ಪಿ.ಐ. ಕುಮಾರ ಕೆ., ಪಿ.ಎಸ್.ಐ. ಅನಿಲ ಬಿ.ಎಂ., ಗೀತಾ ಸಿರ್ಸಿಕರ, ಸಿಬ್ಬಂದಿ ಶುಕೂರು, ರಮೇಶ ಕೂಡಲ್, ದೇವರಾಜ ನಾಯ್ಕ, ಮೋಹನ ಗಾವಡಿ, ಸುನೀಲ್ ಜಂಗಲಿ, ರಾಮಾ ಕುದ್ರಗಿ, ಮಣಿಕಂಠ, ಪರಶುರಾಮ ಸುಣಗಾರ ಅವರು ಕಳ್ಳತನ ಮಾಡಿದವರನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.