ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ನನ್ನ ವಿರುದ್ಧ ಉಡಾಫೆ ಮಾತಗಳನ್ನಾಡುವ ಮೂಲಕ ಬಾಲೀಶತನವನ್ನು ಪ್ರದರ್ಶಿಸುತ್ತಿರುವ ಸಚಿವ ಈಶ್ವರ ಖಂಡ್ರೆಗೆ ಈ ಚುನಾವಣೆಯಲ್ಲಿ ಕ್ಷೇತ್ರದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಘೋಷಿತ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖೂಬಾ ಎಚ್ಚರಿಸಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅದು ಅಸಾಧ್ಯ. 60 ವರ್ಷಗಳಲ್ಲಿ ಮಾಡದ ಕಾರ್ಯವನ್ನು ನಾವು 10 ವರ್ಷದಲ್ಲಿ ಮಾಡಿ ತೋರಿಸಿದ್ದೇವೆ. ದೇಶದ ಜನರಲ್ಲಿ ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಆಶಾಕಿರಣ ಮೂಡಿದೆ ಎಂದರು.
ಒಬ್ಬ ಸಾಮಾನ್ಯ ವ್ಯಕ್ತಿ ಸಹ ವಿಮಾನದಲ್ಲಿ ಪ್ರಯಾಣಿಸಬಹುದೆಂಬ ಗುರಿಯಿಟ್ಟುಕೊಂಡು ಜಿಲ್ಲೆಯಲ್ಲಿ ನಾಗರಿಕ ವಿಮಾನಯಾನ ಆರಂಭಿಸಲಾಯಿತು. ಉಡಾನ್ ಯೋಜನೆಯಡಿ ಮೂರು ವರ್ಷದ ಸಬ್ಸಿಡಿ ಯೋಜನೆ ಮುಗಿದಿದ್ದು ರಾಜ್ಯ ಸರ್ಕಾರಕ್ಕೆ ಈ ಕುರಿತು ಪತ್ರ ಬರೆದಿದ್ದೇನೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಆರೋಪಿಸಿದರು.ಲೋಕಸಭೆ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುವುದಿಲ್ಲ. ಈಗಾಗಲೇ ಕಾಂಗ್ರೆಸ್ ಶಾಸಕರು ಕುದಿಯುತ್ತಿದ್ದಾರೆ. ಅದು ಚುನಾವಣೆ ಬಳಿಕ ಸ್ಫೋಟಗೊಳ್ಳುತ್ತದೆ. ಹೀಗಾಗಿ ನಮಗೆ ಆಪರೇಷನ್ ಮಾಡುವ ಅಗತ್ಯವೇ ಇಲ್ಲ. ಸರ್ಕಾರ ತನ್ನಿಂದ ತಾನೆ ಬಿದ್ದು ಹೋಗುತ್ತದೆ ಎಂದರು.
2.5 ಲಕ್ಷ ಮತಗಳ ಅಂತರದಿಂದ ನಮ್ಮ ಗೆಲುವು ಗ್ಯಾರಂಟಿ: ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಕ್ಷೇತ್ರದ ಬಿಜೆಪಿಯ ಎಲ್ಲ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರ ಬೆಂಬಲ ಖೂಬಾ ಅವರಿಗಿದೆ. ಅನಾರೋಗ್ಯದಿಂದ ವಿಶ್ರಾಂತಿಯಲ್ಲಿರುವುದರಿಂದ ಔರಾದ್ ಶಾಸಕ ಪ್ರಭು ಚವ್ಹಾಣ್ ಪ್ರಚಾರದಲ್ಲಿ ಭಾಗಿಯಾಗುತ್ತಿಲ್ಲ. ಅವರು ಬಿಜೆಪಿ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಖೂಬಾ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.ಹುಮನಾಬಾದ್ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಯಾವುದೇ ಗೊಂದಲ ಇಲ್ಲ ಎಂದರು. ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ರಘುನಾಥರಾವ್ ಮಲ್ಕಾಪೂರೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ರಾಜಕುಮಾರ ಪಾಟೀಲ್ ತೇಲ್ಕೂರ್, ಪಕ್ಷದ ಕಲಬುರಗಿ ವಿಭಾಗಿಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಪಕ್ಷದ ರಾಷ್ಟ್ರೀಯ ಎಸ್‌ಸಿ ಮೋರ್ಚಾದ ಜೈಕುಮಾರ ಕಾಂಗೆ, ನಗರ ಸಭೆ ಸದಸ್ಯ ಶಶಿ ಹೊಸಳ್ಳಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ್, ಪೀರಪ್ಪ ಯರನಳ್ಳಿ, ಬಸವರಾಜ ಪವಾರ, ಜಿಲ್ಲಾ ವಕ್ತಾರ ಸದಾನಂದ ಜೋಷಿ, ಮಾಧ್ಯಮ ಪ್ರಮುಖ ಶ್ರೀನಿವಾಸ ಚೌದ್ರಿ ಸೇರಿದಂತೆ ಮತ್ತಿತರರು ಇದ್ದರು.