ಸಾರಾಂಶ
ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಘೋಷಿಸಿಕೊಂಡಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಲು ಶಿವಮೊಗ್ಗಕ್ಕೆ ಬಂದಿದ್ದು, ಅವರಿಗೆ ಬೆಂಬಲ ನೀಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಭೋವಿ ಸಮಾಜದ ಮುಖಂಡ ಗೂಳಿಹಟ್ಟಿ ಶೇಖರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಘೋಷಿಸಿಕೊಂಡಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಲು ಶಿವಮೊಗ್ಗಕ್ಕೆ ಬಂದಿದ್ದು, ಅವರಿಗೆ ಬೆಂಬಲ ನೀಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಭೋವಿ ಸಮಾಜದ ಮುಖಂಡ ಗೂಳಿಹಟ್ಟಿ ಶೇಖರ್ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಶ್ವರಪ್ಪನವರು ಕಟ್ಟಾ ಹಿಂದು ಧರ್ಮದ ಅಭಿಮಾನಿಗಳಾಗಿದ್ದಾರೆ. ದೇವರ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದೆ. ಅವರು ನಮ್ಮ ಹಿತವನ್ನು ಯಾವಾಗಲೂ ಬಯಸಿದ್ದಾರೆ. ನಮಗೆ ಬೆಂಬಲ ನೀಡಿದ್ದಾರೆ. ನಮಗೆ ಪ್ರೇರಣೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡುವುದು ನನ್ನ ಕರ್ತವ್ಯ ಎಂದರು.
ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಚುನಾವಣೆ ಮುಗಿಯುವವರಿಗೂ ನಾನು ಅವರ ಜೊತೆಯೇ ಇರುತ್ತೇನೆ. ನಮ್ಮ ಸಮಾಜದಲ್ಲಿಯೂ ಹಲವರು ಬಿಜೆಪಿಯಲ್ಲಿಯೂ ಇದ್ದಾರೆ. ಅಂಥವರ ಮನಸ್ಸನ್ನು ನಾನು ಸೆಳೆಯುತ್ತೇನೆ. ಈಶ್ವರಪ್ಪ ಅವರನ್ನು ಬೆಂಬಲಿಸುವಂತೆ ಕೇಳಿಕೊಳ್ಳುತ್ತೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವೇ ಹೊರತು, ನಮ್ಮ ಸಮಾಜದ ಅಭಿಪ್ರಾಯವಲ್ಲ. ಭೋವಿ ಸಮಾಜದಲ್ಲಿ ಎಲ್ಲ ಪಕ್ಷದವರು ಇದ್ದಾರೆ ಎಂದರು.ಬಿಜೆಪಿಯಿಂದ ಭೋವಿ ಸಮಾಜಕ್ಕೆ ಅನ್ಯಾಯ:
ಈಶ್ವರಪ್ಪನವರ ಹಾಗೆ ಬಿಜೆಪಿಯಲ್ಲಿ ಹಲವರಿಗೆ ಅನ್ಯಾಯವಾಗಿದೆ. ಸಿ.ಟಿ.ರವಿ, ಸದಾನಂದಗೌಡ, ಪ್ರತಾಪ ಸಿಂಹ, ಇವರೆಲ್ಲರನ್ನು ಕೈ ಬಿಟ್ಟಿರುವುದರಿಂದ ಬಿಜೆಪಿಗೆ ಹಿನ್ನಡೆಯಾಗಲಿದೆ. ಬಿಜೆಪಿಯಿಂದ ಭೋವಿ ಸಮಾಜಕ್ಕೆ ಖಂಡಿತ ಅನ್ಯಾಯವಾಗಿದೆ. ಈಶ್ವರಪ್ಪನವರು ಸಹ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿ ಆಯಾಗಬೇಕು ಎಂದು ಬಯಸಿಯೇ ಬಂಡಾಯವಾಗಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.ಭೋವಿಗಳಿಗೆ 2 ಕ್ಷೇತ್ರಗಳಲ್ಲಿ ಟಿಕೆಟ್:
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಭೋವಿ ಸಮಾಜವಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ 50 ಸಾವಿರಕ್ಕೂ ಹೆಚ್ಚು ಹಾಗೂ ಶಿಕಾರಿಪುರ ಒಂದರಲ್ಲಿಯೇ 55 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಷ್ಟೊಂದು ಜನಸಂಖ್ಯೆ ಇಟ್ಟುಕೊಂಡು ನಮ್ಮ ಸಮಾಜದವರು ಯಾರು ವಿಧಾನಸಭೆಗೆ ಆಗಲಿ, ಲೋಕಸಭೆಗಾಗಲಿ ಸ್ಪರ್ಧಿಸಿಲ್ಲ. ಯಾವ ಪಕ್ಷಗಳು ಆದ್ಯತೆ ನೀಡಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಾದರೂ 2 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದರು.- - -
ಬಾಕ್ಸ್ ಇಲ್ಲೇ ಇದ್ದು ಈಶ್ವರಪ್ಪ ಪರ ಪ್ರಚಾರ ಶಿವಮೊಗ್ಗ: ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಸಾರಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಬುಧವಾರ ಶಿವಮೊಗ್ಗ ನಗರದ ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಂಧಾನಕ್ಕೆ ಬಂದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮುಗಿಯುವರೆಗೆ ಅವರೊಂದಿಗೆ ಇದ್ದು, ಅವರ ಪರ ಕ್ಷೇತ್ರದಲ್ಲಿ ಪ್ರಚಾರ ಮಾಡುವೆ. ಈ ಹಿಂದಿನಿಂದಲೂ ಹಿಂದೂ ಹುಲಿ ಈಶ್ವರಪ್ಪ ಅವರನ್ನ ಬೆಂಬಲಿಸಲು ಬಂದಿದ್ದೇನೆ. ಪಕ್ಷ ಶುದ್ಧೀಕರಣದ ಬಗ್ಗೆ ಈಶ್ವರಪ್ಪ ಧ್ವನಿ ಎತ್ತಿದ್ದಾರೆ. ಇದು ಸತ್ಯನೂ ಹೌದು. ಪಕ್ಷದಲ್ಲಿ ಸರಿಯಾಗಬೇಕಿದೆ ಎಂದು ತಿಳಿಸಿದರು. ಬಿಜೆಪಿಯನ್ನು ಈಶ್ವರಪ್ಪನವರೂ ಕಟ್ಟಿ ಬೆಳೆಸಿದ್ದಾರೆ. ಆದರೆ, ಈ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಪ್ರತಾಪ್ ಸಿಂಹ, ಸಿ.ಟಿ.ರವಿ, ಸದಾನಂದ ಗೌಡ ಅವರಂಥ ಹಿಂದುತ್ವವಾದಿಗಳಿಗೆ ಟಿಕೆಟ್ ಕೊಡದ ಬಗ್ಗೆ ಬಿ.ಎಸ್. ಯಡಿಯೂರಪ್ಪ ಅವರನ್ನೇ ಕೇಳಬೇಕು. ಹಿಂದುತ್ವ ಪರ ಇರುವ ನಾಯಕರನ್ನು ತುಳಿಯುತ್ತಿರುವುದು ಸರಿಯಲ್ಲ ಎಂದರು. - - -- - - (ಫೋಟೋ: ಗೂಳಿ.ಜೆಪಿಜಿ)ಸಾಂದರ್ಭಿಕ ಚಿತ್ರ.