ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗಸಚಿವ ಭೈರತಿ ಸುರೇಶ್ ಅವರು ರಾಜಕೀಯ ಟೀಕೆ ಮಾಡುವ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿಯವರ ಸಾವಿನ ಕುರಿತಾಗಿ ಮಾತನಾಡಿರುವುದು ಖಂಡನೀಯವಾಗಿದ್ದು, ನೈತಿಕತೆ ಇದ್ದರೆ ಸುರೇಶ್ ಅವರು ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹ ಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸರೇಶ್ ಅವರ ಈ ರೀತಿಯ ಟೀಕೆ ಕೇಳಿ ತೀವ್ರ ನೋವಾಗಿದೆ. ನನಗೆ ಈ ರೀತಿ ನೋವಾಗುವುದಾದರೆ ಇನ್ನು ಆ ಕುಟುಂಬ ಸದಸ್ಯರಿಗೆ ಎಷ್ಟು ನೋವಾಗಬೇಡ. ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಆದರೆ ಇದು ನೈತಿಕತೆಯನ್ನು ಮೀರಿ ವೈಯುಕ್ತಿಕ ನೆಲೆಗಟ್ಟಿನತ್ತ ಹೊರಳುವುದು ಸರಿಯಲ್ಲ. ಇನ್ನು ಮುಂದಾದರೂ ಇಂತಹ ಹೇಳಿಕೆಗಳ ಕುರಿತಾಗಿ ರಾಜಕಾರಣಿಗಳು ಎಚ್ಚರ ವಹಿಸಲಿ ಎಂದು ಹೇಳಿದರು.ಅದೇ ರೀತಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಕೂಡ ಸಿಎಂ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಾವಿನ ಬಗ್ಗೆಯೂ ಮಾತನಾಡಿದ್ದಾರೆ. ಇದು ಕೂಡ ಸರಿಯಲ್ಲ. ಆ ತಾಯಿ ಈಗಾಗಲೇ ಪುತ್ರ ಶೋಕದಿಂದ ನೋವು ಅನುಭವಿಸುತ್ತಿದ್ದು, ಈಗ ಮತ್ತೆ ಇಂತಹ ಹೇಳಿಕೆಯಿಂದ ಮತ್ತೆ ನೋವು ಕೊಡುವುದು ಸರಿಯಲ್ಲ. ಈ ಇಬ್ಬರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಸ್ವಲ್ಪವಾದರೂ ನೈತಿಕತೆ ಇದ್ದರೆ ಇವರು ಸಾರ್ವಜನಿಕ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
*ಪೇಜಾವರ ಕುರಿತಾದ ಹರಿಪ್ರಸಾದ್ ಹೇಳಿಕೆಗೆ ಖಂಡನೆ:ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಜನಗಣತಿ ವಿಚಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಉಡುಪಿಯ ಪೇಜಾವರ ಶ್ರೀಗಳ ಕುರಿತು ಲಘುವಾಗಿ ಮಾತನಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮಂದಿರ ಕಟ್ಟಲು ತಮ್ಮ ಶ್ರಮ ಹಾಕಿರುವ ಶ್ರೀಗಳ ಕುರಿತು ಮಾತನಾಡುವ ಯಾವ ಯೋಗ್ಯತೆ ಹರಿಪ್ರಸಾದ್ ಗೆ ಇದೆ ಎಂದು ಪ್ರಶ್ನಿಸಿದರು.
ಪೇಜಾವರ ಶ್ರೀಗಳ ರೀತಿಯೇ ಬೇರೆ ಬೇರೆ ಸಮುದಾಯದ ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಕುರಿತು ಮಾತನಾಡುವ ದೈರ್ಯ ಹರಿಪ್ರಸಾದ್ ಗೆ ಇದೆಯೇ ಎಂದ ಅವರು, ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವಾಕ್ ಸ್ವಾತಂತ್ರ್ಯವಿದೆ. ಇದನ್ನು ಹತ್ತಿಕ್ಕುವ ಪ್ರಯತ್ನ ಸರಿಯಲ್ಲ ಎಂದು ನುಡಿದರು.*ಸಂಕ್ರಾಂತಿ ಹೊತ್ತಿಗೆ ಬ್ರಿಗೇಡ್ ಸ್ಥಾಪನೆ:
ಹಿಂದುಳಿತ, ದಲಿತರನ್ನು ಒಳಗೊಂಡ ಬ್ರಿಗೇಡ್ ಸ್ಥಾಪನೆ ಮತ್ತು ಹೆಸರು ಘೋಷಣೆಯ ಸಂಬಂಧ ಸಂಕ್ರಾಂತಿ ದಿನಗಳಲ್ಲಿ ಕೂಡಲ ಸಂಗಮದಲ್ಲಿ ಸುಮಾರು 1 ಸಾವಿರ ಮಂದಿ ಸಾಧು ಸಂತರು ಸೇರಿ ನಿರ್ಧರಿಸಲಿದ್ದಾರೆ ಎಂದರು. ಹಿಂದುತ್ವ ಮತ್ತು ರಾಷ್ಟ್ರ ಭಕ್ತಿಯನ್ನು ಮುಂದಿಟ್ಟುಕೊಂಡೇ ಈ ಸಂಘಟನೆ ಬೆಳೆಸಲಾಗುತ್ತದೆ. ಈ ಕುರಿತಂತೆ ಈಗಾಗಲೇ ಸಾಕಷ್ಟು ಚಟುವಟಿಕೆಗಳು ನಡೆದಿವೆ. ಈ ಸಂಘಟನೆಯ ಸ್ಥಾಪನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.