ಈಶ್ವರಪ್ಪ ಬಂಡಾಯ ಘೋಷಣೆ: ರಂಗೇರಿದ ಚುನಾವಣೆ

| Published : Mar 26 2024, 01:19 AM IST

ಸಾರಾಂಶ

ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಉಮೇದುವಾರಿಕೆ ಘೋಷಣೆ ಬಳಿಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿದೆ.

ಗಣೇಶ್‌ ತಮ್ಮಡಿಹಳ್ಳಿ

ಶಿವಮೊಗ್ಗ: ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಉಮೇದುವಾರಿಕೆ ಘೋಷಣೆ ಬಳಿಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿ ನಿರೀಕ್ಷೆಯಂತೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಸ್‌.ಬಂಗಾರಪ್ಪ ಅವರ ಪುತ್ರಿ ಗೀತಾ ಅವರು ಅಧಿಕೃತ ಅಭ್ಯರ್ಥಿಗಳಾಗದ್ದಾರೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇರುವುದು ಕಂಡು ಬಂದರೂ, ಈ ಮಧ್ಯೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ಎರಡು ಪಕ್ಷದ ಅಭ್ಯರ್ಥಿಗಳ ತಲೆನೋವು ಹೆಚ್ಚಿಸಿರುವುದಂತೂ ಸುಳ್ಳಲ್ಲ.

ಬಿಜೆಪಿಗೆ ಬಂಡಾಯ ಬಿಸಿ:

ಹಾವೇರಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್‌ ಕೈ ತಪ್ಪುತ್ತಿದ್ದಂತೆ ಇತ್ತ ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್‌.ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದಾರೆ. ಈಶ್ವರಪ್ಪ ನಡೆ ಜಿಲ್ಲೆ, ರಾಜ್ಯದ ವ್ಯಾಪ್ತಿ ಮೀರಿ ರಾಷ್ಟ್ರ ಮಟ್ಟದಲ್ಲಿ ಚರ್ಚಾ ವಿಷಯವಾಗಿದ್ದಲ್ಲದೆ, ಸ್ಥಳೀಯ ಬಿಜೆಪಿ ನಿದ್ದೆ ಕೆಡಿಸಿದೆ.

ಪುತ್ರನಿಗೆ ಟಿಕೆಟ್‌ ಕೈ ತಪ್ಪಿದ ಬಳಿಕ ಈಶ್ವರಪ್ಪ ಬಹಿರಂಗವಾಗಿಯೇ ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿದ್ದಾರೆ. ಕುಟುಂಬ ರಾಜಕಾರಣದ ವಿರುದ್ಧ ನನ್ನ ಸ್ಪರ್ಧೆ ಎಂದು ಏರು ಧ್ವನಿಯಲ್ಲೆ ಹೇಳುತ್ತಿದ್ದಾರೆ. ಹಿಂದುಳಿದ ವರ್ಗದ ನಾಯಕ ಹಾಗೂ ಹಿಂದೂ ಪರ ನಾಯಕನಾಗಿ ಗುರುತಿಸಿಕೊಂಡಿರುವ ಕೆ.ಎಸ್‌.ಈಶ್ವರಪ್ಪ ಸ್ಪರ್ಧೆಯಲ್ಲಿ ಉಳಿದೇ ಬಿಟ್ಟರೆ ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜಾತಿ ಸಮೀಕರಣ:

ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಹಿಂದುಳಿದ ವರ್ಗಗಳ ಈಡಿಗ ಸಮುದಾಯಕ್ಕೆ ಸೇರಿದವರು. ಬಿ. ವೈ. ರಾಘವೇಂದ್ರ ವೀರಶೈವ ಲಿಂಗಾಯತ ಸಮುದಾಯದವರು. ಜಿಲ್ಲೆಯಲ್ಲಿ ಈಡಿಗ ಹಾಗೂ ಲಿಂಗಾಯತ ಸಮುದಾಯಗಳು ಮಲೆನಾಡಿನಲ್ಲಿ ಪ್ರಬಲ ಜಾತಿಗಳಾಗಿರುವುದರಿಂದ ಸ್ಪರ್ಧೆಯು ತೀವ್ರ ಕುತೂಹಲ ಕೆರಳಿಸಿದೆ. ಎರಡೂ ಪಕ್ಷಗಳು ಅಳೆದು ತೂಗಿ, ಜಾತಿ ಸಮೀಕರಣ ಮಾಡಿ ಟಿಕೆಟ್‌ ನೀಡಿವೆ. ಇನ್ನ ಬಂಡೆದ್ದಿರುವ ಈಶ್ವರಪ್ಪ ಅವರು ಕುರುಬ ಸಮುದಾಯಕ್ಕೆ ಸೇರಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯವನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಕುರುಬ ಸಮುದಾಯ ಹೆಚ್ಚಿದೆ. ಈ ಮೂರು ಅಭ್ಯರ್ಥಿಗಳು ಜಾತಿ ಲೆಕ್ಕಚಾರದಿಂದಲೇ ಈ ಬಾರಿ ಚುನಾವಣೆಯಲ್ಲಿ ದಾಳ ಹೂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಈಡಿಗರ ಒಲವು ಯಾರ ಕಡೆಗೆ:

ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಪ್ರಬಲವಾಗಿರುವ ಈಡಿಗರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದ ಕಡೆಗೆ ವಾಲುತ್ತಾರೋ ಆ ಪಕ್ಷದ ಅಭ್ಯರ್ಥಿಯದ್ದೆ ಗೆಲುವು ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಈ ಬಾರಿ ಈಡಿಗ ಸಮುದಾಯದ ಗೀತಾ ಅವರಿಗೆ ಕಾಂಗ್ರೆಸ್‌ ಪಕ್ಷ ಮಣೆ ಹಾಕಿದೆ. ಆದರೆ, ಈಡಿಗರು ಒಂದೇ ಪಕ್ಷದ ಪರ ವಾಲುವ ಸಾಧ್ಯತೆ ಇಲ್ಲವಾಗಿದೆ.

ಬಿಜೆಪಿ ಭದ್ರಕೋಟೆ:

ಬಿ.ಎಸ್‌.ಯಡಿಯೂರಪ್ಪ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾದ ಬಳಿಕ ಜಿಲ್ಲೆಯನ್ನು ಬಿಜೆಪಿ ಭದ್ರಕೋಟೆಯಾಗಿ ಪರಿವರ್ತಿಸಿರುವುದು ಸುಳ್ಳಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ನಗರ, ತೀರ್ಥಹಳ್ಳಿ, ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರು ಇದ್ದಾರೆ. ಜೊತೆಗೆ ಒಬ್ಬರು ಜೆಡಿಎಸ್‌ ಶಾಸಕರು ಇದ್ದಾರೆ. ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ಇರುವುದರಿಂದ ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಕೂಡ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಕಳೆದ ಮೂರು ಲೋಕಸಭೆ ಚುನಾವಣೆಯಲ್ಲೂ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಕೈ ಹಿಡಿದಿದ್ದಾರೆ.

ಇನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಗೀತಾ ಈ ಹಿಂದೆ 2014 ರಲ್ಲಿ ಜೆಡಿಎಸ್‌ ನಿಂದ ಸ್ಪರ್ಧೆ ಮಾಡಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸೋತಿದ್ದರು. ಈ ಬಾರಿ ಕಾಂಗ್ರೆಸ್‌ ನಿಂದ ಸ್ಪರ್ಧೆ ಮಾಡುತ್ತಿದ್ದು, ಜಿಲ್ಲೆಯಲ್ಲಿ ಭದ್ರಾವತಿ, ಸೊರಬ, ಸಾಗರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಗೀತಾ ಅವರ ಸಹಯೋದರ ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದು ಗೀತಾ ಅವರಿಗೆ ವರವಾಗಿದೆಯೇ ಕಾದು ನೋಡಬೇಕಿದೆ.