ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಚುನಾವಣಾ ಕಣಕ್ಕೆ ಇಳಿದು, ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್.ಈಶ್ವರಪ್ಪ ಅವರು ಪುನಃ ಬಿಜೆಪಿ ಸೇರಲು ತೆರೆಮರೆಯಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆಯೇ? ಹೀಗೊಂದು ಚರ್ಚೆ ಬಿಜೆಪಿ ಪಕ್ಷದ ಅಂಗಳದಲ್ಲಿ ನಡೆಯುತ್ತಿದೆ. ಬಿಜೆಪಿಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ಈಶ್ವರಪ್ಪ ಅವರಿಗೆ ಈಗಲೂ ಪಕ್ಷದ ವರಿಷ್ಠರ ಪೈಕಿ ಕೃಪಾಕಟಾಕ್ಷ ಇದೆ ಎನ್ನಲಾಗುತ್ತಿದ್ದು, ಈ ಗುಂಪು ಈಶ್ವರಪ್ಪ ಅವರನ್ನು ಮತ್ತೆ ಬಿಜೆಪಿಗೆ ಮರಳಿ ಕರೆ ತರಲು ಸಿದ್ಧತೆ ನಡೆಸಿದೆ.ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಿಂದ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದರಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಕೂಡ ಮಾಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಟಿಕೆಟ್ ನಿರಾಕರಿಸಲಲಾಯಿತು. ಇದರಿಂದ ಆಕ್ರೋಶಗೊಂಡಿದ್ದ ಈಶ್ವರಪ್ಪ ಶಿವಮೊಗ್ಗದಲ್ಲಿ ತಾವು ಸ್ಪರ್ಧಿಸುವುದಾಗಿ ಘೋಷಿಸಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಹಿರಿಯ ನಾಯಕರು ಕಣದಿಂದ ಹಿಂದಕ್ಕೆ ಸರಿಯುವಂತೆ ಮನವಿ ಮಾಡಿದ್ದನ್ನು ಕೂಡ ಈಶ್ವರಪ್ಪ ನಯವಾಗಿಯೇ ನಿರಾಕರಿಸಿ, ಯಡಿಯೂರಪ್ಪ ಕುಟುಂಬದ ಕೈಯಿಂದ ಪಕ್ಷವನ್ನು ರಕ್ಷಿಸಿ ಎಂದು ಪ್ರಚಾರಾಂದೋಲನ ಆರಂಭಿಸಿ, ಇದಕ್ಕಾಗಿಯೇ ತಮ್ಮ ಚುನಾವಣಾ ಸ್ಪರ್ಧೆ ಎಂದು ಹೇಳಲಾರಂಭಿಸಿದ್ದರು. ಬಳಿಕ ಇವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಯಿತು.
ಈಶ್ವರಪ್ಪ ಅವರು ಚುನಾವಣಾ ಸಂದರ್ಭದಲ್ಲಿ ಕೂಡ ತಾವು ಈಗಲೂ ಬಿಜೆಪಿಯಲ್ಲಿಯೇ ಇದ್ದು, ಲೋಕಸಭೆಯಲ್ಲಿ ಗೆದ್ದು ಮೋದಿ ಪರವಾಗಿ ಕೈ ಎತ್ತುತ್ತೇನೆ ಎಂದು ಘೋಷಿಸಿ ದ್ದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಇಟ್ಟುಕೊಂಡೇ ಚುನಾವಣಾ ಪ್ರಚಾರ ನಡೆಸಿದ್ದರು. ಚುನಾವಣಾ ಬಳಿಕ ಜಗದೀಶ್ ಶೆಟ್ಟರ್ ರೀತಿ ತಾವೂ ಬಿಜೆಪಿಗೆ ಮರಳುವುದಾಗಿಯೂ, ಮುಂದೆ ನಡೆಯುವ ನಗರ ಪಾಲಿಕೆ ಚುನಾವಣೆಯಲ್ಲಿ ತಾವೇ ಟಿಕೆಟ್ ಹಂಚುವ ಸ್ಥಾನದಲ್ಲಿ ಇರುವುದಾಗಿ ಹೇಳಿದ್ದರು.ಆದರೆ, ಚುನಾವಣೆಯಲ್ಲಿ ಈಶ್ವರಪ್ಪ ಅವರು ಚುನಾವಣೆಯಲ್ಲಿ ಸೋತಿದ್ದರು. ಸೋತ ಬಳಿಕವೂ ತಮ್ಮ ರಾಷ್ಟ್ರಭಕ್ತರ ಬಳಗದ ಜೊತೆ ಸಕ್ರಿಯವಾಗಿಯೇ ಇದ್ದು, ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸುವುದಾದರೆ ಈಶ್ವರಪ್ಪ ಪಕ್ಷ ಸೇರುವುದು ಬಹುತೇಕ ಖಚಿತವಾಗುತ್ತಿದೆ. ಖಚಿತವಾಗದ ಬಿಎಸ್‌ವೈ, ವಿಜಯೇಂದ್ರ ತೀರ್ಮಾನ
ಇಷ್ಟಾಗಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಕೆ.ಎಸ್.ಈಶ್ವರಪ್ಪ ಪುನಃ ಬಿಜೆಪಿ ಸೇರವ ವಿಷಯದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಇನ್ನೂ ಗೊತ್ತಾಗಿಲ್ಲ. ಅವರ ಕುಟುಂಬದ ವಿಷಯದಲ್ಲಿ ಸಾಕಷ್ಟು ಮಾತನಾಡಿರುವ ಈಶ್ವರಪ್ಪ ಅವರ ಕುರಿತಾಗಿ ಯಡಿಯೂರಪ್ಪ ಅವರಿಗೆ ತೀವ್ರ ಅಸಮಾಧಾನ ಇರುವುದಂತೂ ನಿಜ.‘ಪಕ್ಷ ಸೇರೋದು ಖಚಿತ; ಕಾಲ ನಿರ್ಣಯವಾಗಿಲ್ಲ’ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈಶ್ವರಪ್ಪ ಅವರು ಬಿಜೆಪಿ ವರಿಷ್ಠರು ಬಿಜೆಪಿ ವಾಪಾಸ್ಸಾಗುವಂತೆ ತಮಗೆ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟೇ ಮಾತುಕತೆ ನಡೆಯಬೇಕಿದೆ. ಪಕ್ಷ ಸೇರುವುದಂತೂ ಖಚಿತ. ಆದರೆ ಯಾವಾಗ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ ಎಂದು ಹೇಳಿದ್ದಾರೆ.